ದೈಹಿಕ ಕ್ಷಮತೆಗಾಗಿ ಸೈಕಲ್ ಸವಾರಿ ಮಾಡಿ: ಯುವಜನರಿಗೆ ಕೇಂದ್ರ ಕ್ರೀಡಾ ಸಚಿವ ಕರೆ

ವಾರಾಣಸಿ, ಜು. 20: ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ನ 32ನೇ ಆವೃತ್ತಿಯು ಭವ್ಯ ಸಮಾರಂಭದೊಂದಿಗೆ ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಆವರಣದಲ್ಲಿ ರವಿವಾರ ಸಮಾಪ್ತಿಗೊಂಡಿತು. ದೈಹಿಕ ಕ್ಷಮತೆಗಾಗಿ ಸೈಕಲ್ ಸವಾರಿ ಮಾಡುವಂತೆ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಮನ್ಸುಖ್ ಮಾಂಡವೀಯ ಯುವಜನರಿಗೆ ಕರೆ ನೀಡಿದರು.
ಸಚಿವರು ಸುಮಾರು 3,000 ಜನರೊಂದಿಗೆ ಸೈಕಲ್ ಸವಾರಿ ಮಾಡುತ್ತಾ, ಮಾದಕ ದ್ರವ್ಯ ಸೇವನೆಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು. ‘‘ಆರೋಗ್ಯಯುತ ದೇಹದಲ್ಲಿ ಮಾತ್ರ ಆರೋಗ್ಯಯುತ ಮನಸ್ಸು ಇರುತ್ತದೆ ಹಾಗೂ ಆರೋಗ್ಯಯುತ ಮನಸ್ಸು ಮಾತ್ರ ದೇಶವನ್ನು ವಿಕಸಿತ ಭಾರತದತ್ತ ಮುನ್ನಡೆಸಲು ಸಾಧ್ಯ’’ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು.
‘‘ಸಂಡೇಸ್ ಆನ್ ಸೈಕಲ್ ಜನಾಂದೋಲನವಾಗಿ ಪರಿವರ್ತನೆಯಾಗಿದೆ. ಇಂದು ಉಪಖಂಡದ 6,000ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು ‘ವಿಕಸಿತ ಭಾರತಕ್ಕಾಗಿ ನಶೆ-ಮುಕ್ತ ಯುವಜನ’ ಅಭಿಯಾನದಲ್ಲಿ ಪಾಲ್ಗೊಂಡಿವೆ. ದೇಶದ ಯುವಕರು ದೈಹಿಕ ಕ್ಷಮತೆಯೊಂದಿಗೆ ಆರೋಗ್ಯವಂತರಾಗಿರಬೇಕು ಮತ್ತು ದೇಶದ ಪ್ರಗತಿಯಲ್ಲಿ ಭಾಗಿಯಾಗಬೇಕು ಎನ್ನುವುದು ಈ ಅಭಿಯಾನದ ಹಿಂದಿನ ಸರಕಾರದ ಉದ್ದೇಶವಾಗಿದೆ’’ ಎಂದು ಅವರು ಹೇಳಿದರು.





