2026ರ ಫಿಫಾ ವಿಶ್ವಕಪ್ನಲ್ಲಿ ಹಲವು ದಾಖಲೆಗಳು ಪತನ ಸಾಧ್ಯತೆ

Photo Credit : PTI
ಮೆಕ್ಸಿಕೊ ಸಿಟಿ, ಜೂ.11: ಫಿಫಾ ವಿಶ್ವಕಪ್ 2026- ಫುಟ್ಬಾಲ್ನ ಅತ್ಯಂತ ಭವ್ಯ ಪ್ರದರ್ಶನದ ಮತ್ತೊಂದು ಆವೃತ್ತಿಯಲ್ಲ. ಇದು ಹಿಂದೆಂದೂ ಕಂಡಿರದ ಸಂಖ್ಯೆಗಳಿಂದ ಆವೃತವಾದ ಪಂದ್ಯಾವಳಿಯಾಗಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ 1,248 ಆಟಗಾರರು ಭಾಗವಹಿಸಲಿದ್ದು, 104 ಪಂದ್ಯಗಳು ನಡೆಯಲಿವೆ. 48 ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಹಲವು ದಾಖಲೆಗಳು ಪತನವಾಗುವ ಸಾಧ್ಯತೆಯಿದೆ.
ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊದಲ್ಲಿ ನಡೆಯಲಿರುವ ಪಂದ್ಯಾವಳಿಯು ವಿಶ್ವಕಪ್ ಟೂರ್ನಿಯನ್ನು ಮರು ವ್ಯಾಖ್ಯಾನಿಸಲು ಸಜ್ಜಾಗಿದೆ.
ಫಿಫಾ ಸ್ಪರ್ಧಾವಳಿಯನ್ನು 32 ತಂಡಗಳಿಂದ 48ಕ್ಕೆ ವಿಸ್ತರಿಸಲಾಗಿದೆ. 32 ತಂಡಗಳ ಹೊಸ ಸುತ್ತನ್ನು ಪರಿಚಯಿಸಲಾಗಿದೆ. ಹೀಗಾಗಿ ಹಲವು ದಾಖಲೆಗಳು ನಿರ್ಮಾಣವಾಗಬಹುದು.
2026ರ ವಿಶ್ವಕಪ್ನ ಅಂಕಿ-ಅಂಶಗಳು ಇಂತಿವೆ
104 ಪಂದ್ಯಗಳು, 48 ತಂಡಗಳು, ಮೂರು ದೇಶಗಳ ಆತಿಥ್ಯ: ಈ ತನಕದ ಅತ್ಯಂತ ದೊಡ್ಡ ವಿಶ್ವಕಪ್
ವಿಶ್ವಕಪ್ ಟೂರ್ನಿಯನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗಿಲ್ಲ. 2026ರ ಆವೃತ್ತಿಯಲ್ಲಿ ದಾಖಲೆಯ 48 ದೇಶಗಳು ಸ್ಪರ್ಧಿಸಲಿವೆ. 39 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 104 ಪಂದ್ಯಗಳು ನಡೆಯಲಿವೆ. 1998ರಿಂದ 2022ರ ಈ ಹಿಂದಿನ ಏಳು ಆವೃತ್ತಿಗಳಲ್ಲಿ ಕೇವಲ 64 ಪಂದ್ಯಗಳಿದ್ದವು.
2002ರ ವಿಶ್ವಕಪ್ ಟೂರ್ನಿಯನ್ನು ಜಪಾನ್ ಹಾಗೂ ದಕ್ಷಿಣ ಕೊರಿಯಾ ಆಯೋಜಿಸಿದ್ದವು. ಆ ಬಳಿಕ ಎರಡನೇ ಬಾರಿ ಒಂದಕ್ಕಿಂತ ಹೆಚ್ಚು ದೇಶಗಳು ಪಂದ್ಯಾವಳಿಯ ಆತಿಥ್ಯವಹಿಸಿಕೊಂಡಿವೆ.
ಮೂರು ದೇಶಗಳ ಒಟ್ಟು 16 ನಗರಗಳು ಪಂದ್ಯಗಳ ಆತಿಥ್ಯವಹಿಸಲಿವೆ. ಅಮೆರಿಕದ 11 ನಗರಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದೆ. ಮೆಕ್ಸಿಕೊದ ಮೂರು ಹಾಗೂ ಕೆನಡಾದ ಎರಡು ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ.
ಮೆಕ್ಸಿಕೊ ದೇಶವು ಗುರುವಾರ ಮೆಕ್ಸಿಕೊ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಸಹಿತ 13 ಪಂದ್ಯಗಳನ್ನು ಆಯೋಜಿಸಲಿದೆ. ಕೆನಡಾ ದೇಶ ಕೂಡ 13 ಪಂದ್ಯಗಳನ್ನು ಆಯೋಜಿಸಲಿದೆ.
ಉಳಿದ 78 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುತ್ತದೆ. ಅಮೆರಿಕ ದೇಶವು ಕ್ವಾರ್ಟರ್ ಫೈನಲ್ಗಳು, ಎರಡೂ ಸೆಮಿ ಫೈನಲ್ಗಳು ಹಾಗೂ ನ್ಯೂ ಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯದ ಆತಿಥ್ಯವನ್ನು ವಹಿಸಲಿದೆ.
449 ಕ್ಲಬ್ಗಳು ಹಾಗೂ 71 ದೇಶಗಳ 1,248 ಆಟಗಾರರು
71 ದೇಶಗಳಲ್ಲಿನ 449 ಫುಟ್ಬಾಲ್ ಕ್ಲಬ್ಗಳನ್ನು ಪ್ರತಿನಿಧಿಸುವ ದಾಖಲೆಯ 1,248 ಫುಟ್ಬಾಲ್ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ 357 ಆಟಗಾರರು ಈ ಹಿಂದೆ ವಿಶ್ವಕಪ್ ಟೂರ್ನಿ ಆಡಿರುವ ಅನುಭವ ಹೊಂದಿದ್ದಾರೆ. 891 ಆಟಗಾರರು ಇದೇ ಮೊದಲ ಬಾರಿ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇಂಗ್ಲೆಂಡ್ ಮೂಲದ ಕ್ಲಬ್ಗಳಿಂದ ಬಂದಿರುವ 200 ಫುಟ್ಬಾಲ್ ಆಟಗಾರರು ವಿಶ್ವಕಪ್ನಲ್ಲಿ ಆಡಲಿದ್ದಾರೆ. ಜರ್ಮನಿಯ ಕ್ಲಬ್ಗಳಿಂದ 109 ಆಟಗಾರರಿದ್ದಾರೆ.
226 ಪಂದ್ಯಗಳು: ಕ್ರಿಸ್ಟಿಯಾನೊ ರೊನಾಲ್ಡೊ ಅವರ ಅಭೂತಪೂರ್ವ ಮೈಲಿಗಲ್ಲು
ಒಟ್ಟು 226 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ, ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಗರಿಷ್ಠ ಪಂದ್ಯವನ್ನಾಡಿರುವ ಫುಟ್ಬಾಲಿಗನಾಗಿದ್ದಾರೆ. 41ರ ಹರೆಯದ ರೊನಾಲ್ಡೊ ಅವರು ಲಿಯೊನೆಲ್ ಮೆಸ್ಸಿ ನಂತರ ಆರನೇ ವಿಶ್ವಕಪ್ ಟೂರ್ನಿಯನ್ನು ಆಡಲಿರುವ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ರೊನಾಲ್ಡೊ ಅವರು ಐದು ವಿವಿಧ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರನಾಗಿದ್ದಾರೆ. ಅವರು 22 ವಿಶ್ವಕಪ್ ಪಂದ್ಯಗಳಲ್ಲಿ ಎಂಟು ಗೋಲುಗಳನ್ನು ಗಳಿಸಿದ್ದಾರೆ.
26 ಪಂದ್ಯಗಳನ್ನು ಆಡುವ ಮೂಲಕ ವಿಶ್ವಕಪ್ನಲ್ಲಿ ಹೆಚ್ಚು ಬಾರಿ ಕಾಣಿಸಿಕೊಂಡಿರುವ ದಾಖಲೆಯನ್ನು ಹೊಂದಿರುವ ಲಿಯೊನೆಲ್ ಮೆಸ್ಸಿ, ಇನ್ನೆರಡು ಪಂದ್ಯಗಳನ್ನು ಆಡಿದರೆ, 200 ಅಂತರ್ರಾಷ್ಟ್ರೀಯ ಪಂದ್ಯಗಳನ್ನು ಆಡಿದ ಮೂರನೇ ಪುರುಷ ಆಟಗಾರನಾಗಲಿದ್ದಾರೆ. ಕ್ರೊಯೇಶಿಯದ ಲುಕಾ ಮೊಡ್ರಿಕ್ಗೆ 200 ಪಂದ್ಯಗಳ ಮೈಲಿಗಲ್ಲು ತಲುಪಲು ಮೂರು ಪಂದ್ಯಗಳನ್ನಾಡಬೇಕಾಗಿದೆ.
16 ಗೋಲುಗಳು: ಮಿರೋಸ್ಲಾವ್ ಕ್ಲೋಸ್ ದಾಖಲೆ ಪತನವಾಗಲಿದೆಯೇ?
ಜರ್ಮನಿಯ ಸ್ಟ್ರೈಕರ್ ಮಿರೋಸ್ಲಾವ್ ಕ್ಲೋಸ್ ವಿಶ್ವಕಪ್ನಲ್ಲಿ ಗಳಿಸಿದ 16 ಗೋಲುಗಳ ದಾಖಲೆಯನ್ನು 10 ವರ್ಷಗಳಿಗೂ ಅಧಿಕ ಸಮಯದಿಂದ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಇಬ್ಬರು ಸೂಪರ್ಸ್ಟಾರ್ಗಳು ಈ ದಾಖಲೆ ಮುರಿಯುವ ಹಾದಿಯಲ್ಲಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಮೆಸ್ಸಿ 13 ಗೋಲುಗಳು, ಕೈಲಿಯನ್ ಎಂಬಾಪೆ 12 ಗೋಲುಗಳನ್ನು ಗಳಿಸಿದ್ದಾರೆ. ಕ್ಲೋಸ್, ಬ್ರೆಝಿಲ್ನ ರೊನಾಲ್ಡೊ ನಝಾರಿಯೊ(15)ಹಾಗೂ ಗೆರ್ಡ್ ಮುಲ್ಲರ್(14) ಅವರು ಸದ್ಯ ಮೆಸ್ಸಿಗಿಂತ ಮುಂದಿದ್ದಾರೆ.
ಏಳು ಪಂದ್ಯಗಳು ಲಭ್ಯವಿರುವುದರಿಂದ ಸಾರ್ವಕಾಲಿಕ ಸ್ಕೋರಿಂಗ್ ದಾಖಲೆಯು ಪತನವಾಗುವ ಅಪಾಯದಲ್ಲಿದೆ.
ಸುದೀರ್ಘ ಟೂರ್ನಿಯ ಇತಿಹಾಸದಲ್ಲಿ ಕೇವಲ ಎಂಟು ಚಾಂಪಿಯನ್ನರು
ವಿಶ್ವಕಪ್ ಪಂದ್ಯಾವಳಿಯು ಸುದೀರ್ಘ ಇತಿಹಾಸವನ್ನು ಹೊಂದಿದ್ದರೂ, ಕೇವಲ ಎಂಟು ದೇಶಗಳು ಮಾತ್ರ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿವೆ. ಐದು ಪ್ರಶಸ್ತಿಗಳನ್ನು ಗೆದ್ದಿರುವ ಬ್ರೆಝಿಲ್ ಯಶಸ್ವಿ ತಂಡವಾಗಿದೆ. ಕಳೆದ 11 ಆವೃತ್ತಿಗಳಲ್ಲಿ ಕೇವಲ ಎರಡು ಹೊಸ ಚಾಂಪಿಯನ್ಗಳು(1998ರಲ್ಲಿ ಫ್ರಾನ್ಸ್, 2010ರಲ್ಲಿ ಸ್ಪೇನ್) ಹೊರಹೊಮ್ಮಿದ್ದಾರೆ.
ಕೇವಲ ಎರಡು ದೇಶಗಳು ಮಾತ್ರ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿವೆ. ಇಟಲಿ(1934 ಹಾಗೂ 1938)ಹಾಗೂ ಬ್ರೆಝಿಲ್(1958 ಹಾಗೂ 1962)ಈ ಸಾಧನೆ ಮಾಡಿವೆ.
ಇತರ ಮೂರು ಹಾಲಿ ಚಾಂಪಿಯನ್ಗಳು ಫೈನಲ್ಗೆ ತಲುಪಿವೆ. 2002ರಲ್ಲಿ ಫ್ರಾನ್ಸ್ ತಂಡ ಸತತವಾಗಿ ಫೈನಲ್ಗೆ ತಲುಪಿದ್ದರೂ ಅರ್ಜೆಂಟೀನಕ್ಕೆ ಸೋಲುಂಡಿತ್ತು.
ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದ ಆರು ಹಾಲಿ ಚಾಂಪಿಯನ್ಗಳು
ಆರು ಹಾಲಿ ಚಾಂಪಿಯನ್ ತಂಡಗಳು ಗ್ರೂಪ್ ಹಂತದಲ್ಲೇ ನಿರ್ಗಮಿಸಿ ಭಾರೀ ನಿರಾಸೆಗೊಳಿಸಿದ್ದವು. ಕಳೆದ ನಾಲ್ಕು ಆವೃತ್ತಿಗಳಲ್ಲಿ ಮೂರು ಬಾರಿ ವಿಶ್ವಕಪ್ ಇದಕ್ಕೆ ಸಾಕ್ಷಿಯಾಗಿದೆ. 2010ರಲ್ಲಿ ಇಟಲಿ, 2014ರಲ್ಲಿ ಸ್ಪೇನ್ ಹಾಗೂ 2018ರಲ್ಲಿ ಜರ್ಮನಿ ಮೊದಲ ಹಂತದಲ್ಲೇ ಎಡವಿದ ಹಾಲಿ ಚಾಂಪಿಯನ್ ತಂಡಗಳಾಗಿದ್ದವು.
ಫ್ರಾನ್ಸ್ ತಂಡವು 2022ರಲ್ಲಿ ಫೈನಲ್ಗೆ ಪ್ರವೇಶಿಸಿ ಈ ಟ್ರೆಂಡನ್ನು ಮುರಿದಿತ್ತು.
ಫ್ರಾನ್ಸ್ಗೆ ಅಪರೂಪದ ಹ್ಯಾಟ್ರಿಕ್ ಫೈನಲ್ ಕನಸು
2018ರಲ್ಲಿ ವಿಶ್ವಕಪ್ ಚಾಂಪಿಯನ್ ಆಗಿದ್ದ ಫ್ರಾನ್ಸ್ ತಂಡವು 2022ರಲ್ಲಿ ಫೈನಲ್ಗೆ ತಲುಪಿತ್ತು. ಈ ಹಿಂದೆ ಕೇವಲ ಎರಡು ದೇಶಗಳು ಮಾತ್ರ ಈ ಸಾಧನೆ ಮಾಡಿದ್ದವು. ಫ್ರಾನ್ಸ್ ತಂಡವು ಈ ಬಾರಿ ಸತತ ಮೂರನೇ ಬಾರಿ ಫೈನಲ್ಗೆ ಪ್ರವೇಶಿಸಿದ ಮೂರನೇ ದೇಶವೆಂಬ ಹಿರಿಮೆಗೆ ಪಾತ್ರರಾಗಲು ಯತ್ನಿಸಲಿದೆ.
ವೆಸ್ಟ್ ಜರ್ಮನಿ(1982, 1986, 1990)ಹಾಗೂ ಬ್ರೆಝಿಲ್(1994, 1998, 2002)ತಂಡಗಳು ಸತತ ಮೂರು ಬಾರಿ ಫೈನಲ್ಗೆ ತಲುಪಿದ ಸಾಧನೆ ಮಾಡಿದ್ದವು.
ಸತತ 23ನೇ ವಿಶ್ವಕಪ್: ಬ್ರೆಝಿಲ್ನ ಅಪ್ರತಿಮ ಸ್ಥಿರತೆ
ಬ್ರೆಝಿಲ್ ತಂಡವು ಸತತ 23ನೇ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಏಕೈಕ ತಂಡವಾಗಿದೆ. 1930ರಲ್ಲಿ ಮೊದಲ ಆವೃತ್ತಿಯ ಟೂರ್ನಿಯಲ್ಲಿ ಆಡಿದ್ದ ಬ್ರೆಝಿಲ್ 76 ಗೆಲುವು, 237 ಗೋಲುಗಳ ಮೂಲಕ ಸಾರ್ವಕಾಲಿಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
21 ವಿಶ್ವಕಪ್ ಟೂರ್ನಿಗಳು, 232 ಗೋಲುಗಳ ಮೂಲಕ ಜರ್ಮನಿ ತಂಡ ಎರಡನೇ ಸ್ಥಾನದಲ್ಲಿದೆ.
ವಿಶ್ವಕಪ್ ಪರಿವಾರಕ್ಕೆ ಸೇರಿದ ನಾಲ್ಕು ತಂಡಗಳು
2026ರ ಆವೃತ್ತಿಯ ಟೂರ್ನಮೆಂಟ್ನಲ್ಲಿ ನಾಲ್ಕು ತಂಡಗಳಾದ ಕೇಪ್ವರ್ಡ್, ಕ್ಯುರಾಕೊ,ಜೋರ್ಡಾನ್ ಹಾಗೂ ಉಜ್ಬೇಕಿಸ್ತಾನ ಇದೇ ಮೊದಲ ಬಾರಿ ಕಾಣಿಸಿಕೊಳ್ಳುತ್ತಿವೆ. ಈ ಮೂಲಕ ವಿಶ್ವಕಪ್ ಆಡಿದ ಒಟ್ಟು ದೇಶಗಳ ಸಂಖ್ಯೆಯು 84ಕ್ಕೆ ಏರಿಕೆಯಾಗಿದೆ. ಕ್ಯುರಾಕೊ ಫುಟ್ಬಾಲ್ನ ಅತಿದೊಡ್ಡ ವೇದಿಕೆ ತಲುಪಿದ ಪುಟ್ಟ ರಾಷ್ಟ್ರಗಳ ಪೈಕಿ ಒಂದಾಗಿದೆ.
ಮೊತ್ತ ಮೊದಲ ವಿಶ್ವಕಪ್ ಗೆಲುವಿಗಾಗಿ ಈಜಿಪ್ಟ್ ಕಾತರ
ಈಜಿಪ್ಟ್ ತಂಡವು ವಿಶ್ವಕಪ್ ಇತಿಹಾಸದಲ್ಲಿ ಅನಪೇಕ್ಷಿತ ದಾಖಲೆಯನ್ನು ಹೊಂದಿದೆ. ವಿಶ್ವಕಪ್ನಲ್ಲಿ ಏಳು ಪಂದ್ಯಗಳನ್ನು ಆಡಿದ್ದರೂ ಈ ತನಕ ಗೆಲುವು ದಾಖಲಿಸಿಲ್ಲ. ಎರಡರಲ್ಲಿ ಡ್ರಾ ಹಾಗೂ ಐದು ಪಂದ್ಯಗಳಲ್ಲಿ ಸೋಲುಂಡಿದೆ. ಈ ವರ್ಷದ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ಹೊಂಡುರಾಸ್ ತಂಡ ಮಾತ್ರ 9 ವಿಶ್ವಕಪ್ ಪಂದ್ಯಗಳನ್ನಾಡಿದ್ದರೂ ಗೆಲುವು ಪಡೆಯಲು ಸಾಧ್ಯವಾಗಿಲ್ಲ.
ಜೂನ್ 15ರಂದು ಬೆಲ್ಜಿಯಂ ವಿರುದ್ಧ ಮೊದಲ ಪಂದ್ಯವನ್ನಾಡಲಿರುವ ಈಜಿಪ್ಟ್ ತಂಡ ವಿಶ್ವಕಪ್ ಗೆಲುವಿನ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿದೆ.
2,720 ಗೋಲುಗಳು ಹಾಗೂ ಇನ್ನಷ್ಟು ದಾಖಲೆಗಳ ನಿರೀಕ್ಷೆ
ಮೊದಲ 22 ಆವೃತ್ತಿಗಳ ವಿಶ್ವಕಪ್ ಟೂರ್ನಿಗಳಲ್ಲಿ 964 ಪಂದ್ಯಗಳಲ್ಲಿ 2,720 ಗೋಲುಗಳು ದಾಖಲಾಗಿವೆ. 2026ರ ಆವೃತ್ತಿಯ ಟೂರ್ನಿಯಲ್ಲಿ ಹೆಚ್ಚುವರಿ 40 ಪಂದ್ಯಗಳನ್ನು ಆಡಲಾಗುತ್ತಿದೆ. 2022ರಲ್ಲಿ ಖತರ್ನಲ್ಲಿ 172 ಗೋಲುಗಳು ದಾಖಲಾಗಿದ್ದು, ಇದು ಟೂರ್ನಿಯ ದಾಖಲೆಯಾಗಿತ್ತು. ಈ ಬಾರಿ ಇದು ಪತನವಾಗುವ ನಿರೀಕ್ಷೆ ಇದೆ.
ಹಿರಿಯ ಹಾಗೂ ಕಿರಿಯ ಆಟಗಾರರಿಗೆ 25 ವರ್ಷಗಳ ಅಂತರ
43 ವರ್ಷ ವಯಸ್ಸಿನ ಸ್ಕಾಟ್ಲ್ಯಾಂಡ್ ತಂಡದ ಗೋಲ್ಕೀಪರ್ ಕ್ರೆಗ್ ಗೋರ್ಡನ್ ಈ ಬಾರಿಯ ವಿಶ್ವಕಪ್ನಲ್ಲಿ ಆಡುತ್ತಿರುವ ಹಿರಿಯ ಆಟಗಾರನಾಗಿದ್ದಾರೆ. ಮತ್ತೊಂದೆಡೆ ಮೆಕ್ಸಿಕೊದ ಗಿಲ್ಬರ್ಟ್ಗೆ ಕೇವಲ 17 ವರ್ಷ ವಯಸ್ಸಾಗಿದೆ. ಪಂದ್ಯಾವಳಿಯ ಹಿರಿಯ ಹಾಗೂ ಕಿರಿಯ ಆಟಗಾರನ ನಡುವೆ 25 ವರ್ಷಗಳಿಗೂ ಅಧಿಕ ಅಂತರವಿದೆ.
2026ರ ಆವೃತ್ತಿಯ ಟೂರ್ನಿಯು ಹಿಂದಿನ ಎಲ್ಲ ವಿಶ್ವಕಪ್ಗಿಂತ ಭಿನ್ನವಾಗಿದೆ ಎಂಬ ಕತೆಯನ್ನು ಈ ಸಂಖ್ಯೆಗಳೇ ಸಾರಿ ಹೇಳುತ್ತಿವೆ. ಇತಿಹಾಸದಲ್ಲೇ ಅತಿದೊಡ್ಡ ವಿಶ್ವಕಪ್ ಮೆಕ್ಸಿಕೊ ಸಿಟಿಯಲ್ಲಿ ಗುರುವಾರ ಅದ್ದೂರಿಯಾಗಿ ಆರಂಭವಾಗಿದೆ.






