ವೃತ್ತಿಪರ ಬಾಕ್ಸಿಂಗ್ ಕೈಗೆತ್ತಿಕೊಳ್ಳುವ ಬಗ್ಗೆ ಪರಿಶೀಲನೆ: ಮೇರಿ ಕೋಮ್

ಮೇರಿ ಕೋಮ್ | Photo Credit : PTI
ಹೊಸದಿಲ್ಲಿ, ಮಾ. 29: ವೃತ್ತಿಪರ ಬಾಕ್ಸಿಂಗ್ ಕೈಗೆತ್ತಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತೆ ಹಾಗೂ ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಮ್.ಸಿ. ಮೇರಿ ಕೋಮ್ ರವಿವಾರ ಹೇಳಿದ್ದಾರೆ.
ಒಲಿಂಪಿಕ್ ಪದಕವೊಂದನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಆಗಿರುವ 43 ವರ್ಷದ ಮೇರಿ ಕೋಮ್, ಹವ್ಯಾಸಿ ವಿಭಾಗದಲ್ಲಿ ಸ್ಪರ್ಧಿಸುವ ವಯೋಮಿತಿಯನ್ನು ಮೀರಿದ್ದಾರೆ. ಅವರು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
‘‘ಆರು ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಗೆದ್ದಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ವಯೋಮಿತಿಯನ್ನು ನಾನು ಮೀರಿರುವುದರಿಂದ ದೇಶಕ್ಕಾಗಿ ಹವ್ಯಾಸಿ ಬಾಕ್ಸಿಂಗ್ ನಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಆದರೆ, ವೃತ್ತಿಪರ ಬಾಕ್ಸಿಂಗ್ ನಲ್ಲಿ ಹೊಸ ಅವಕಾಶವೊಂದು ತೆರೆದುಕೊಂಡಿದೆ’’ ಎಂದು ‘ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
‘‘ನಾನು ಈಗ ಸ್ವಲ್ಪ ಬಿಡುವು ಮಾಡಿಕೊಂಡು ಇದರ ಬಗ್ಗೆ ಯೋಚಿಸುತ್ತಿದ್ದೇನೆ. ನಾನು ಈಗ ಕಠಿಣ ಪರಿಶ್ರಮ ಪಡುತ್ತಿದ್ದು, ಮತ್ತೆ ನನ್ನ ಸಾಮರ್ಥ್ಯವನ್ನು ಸಾಧಿಸಿ ತೋರಿಸಲು ಪ್ರಯತ್ನಿಸುತ್ತಿದ್ದೇನೆ. ಈಗಲೂ ನಾನು ಏನು ಮಾಡಬಹುದು ಎನ್ನುವುದನ್ನು ಜನರಿಗೆ ತೋರಿಸಲು ಬಯಸಿದ್ದೇನೆ’’ ಎಂದು ಅವರು ಹೇಳಿದ್ದಾರೆ.
ಶ್ರೇಷ್ಠ ಹವ್ಯಾಸಿ ಬಾಕ್ಸರ್ ಗಳ ಪೈಕಿ ಒಬ್ಬರೆಂದು ಪರಿಗಣಿಸಲಾಗಿರುವ ಮೇರಿ ಕೋಮ್, ಮಣಿಪುರದಲ್ಲಿರುವ ತನ್ನ ಬಾಕ್ಸಿಂಗ್ ತರಬೇತಿ ಅಕಾಡೆಮಿಯ ಮೂಲಕ ತಳಮಟ್ಟದಲ್ಲಿ ಬದಲಾವಣೆಗಳನ್ನು ತರುವ ತನ್ನ ಬದ್ಧತೆ ಅಚಲವಾಗಿದೆ ಎಂದು ಹೇಳಿದರು.






