ಮ್ಯಾಚ್ ಫಿಕ್ಸಿಂಗ್ ಪ್ರಕರಣ | ಬಾಂಗ್ಲಾ ಮೂಲದ ತಮೀಮ್ ರೆಹಮಾನ್ಗೆ ಜೈಲು ಶಿಕ್ಷೆ ವಿಧಿಸಿದ ಶ್ರೀಲಂಕಾ ನ್ಯಾಯಾಲಯ

ತಮೀಮ್ ರೆಹಮಾನ್ | Photo Credit : X \ YaariSports
ಕೊಲಂಬೊ, ಜ.28: ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾ ನ್ಯಾಯಾಲಯವು ದೇಶೀಯ ಟಿ–20 ಲೀಗ್ ತಂಡದ ಮಾಲಿಕನಿಗೆ ಬುಧವಾರ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸುದ್ದಿಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಬಾಂಗ್ಲಾದೇಶ ಮೂಲದ, ಬ್ರಿಟನ್ ಪ್ರಜೆ ಹಾಗೂ ಡಾಂಬುಲ್ಲಾ ಥಂಡರ್ಸ್ ಫ್ರಾಂಚೈಸಿಯ ಮಾಲಿಕ ತಮೀಮ್ ರೆಹಮಾನ್ ಪಂದ್ಯಾವಳಿಯ ಸಮಯದಲ್ಲಿ ಆಟಗಾರನ ಮೇಲೆ ಪ್ರಭಾವ ಬೀರುವ ಹಾಗೂ ಬೆಟ್ಟಿಂಗ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದ ಆರೋಪವನ್ನು ಒಪ್ಪಿಕೊಂಡಿದ್ದಾರೆ.
ರೆಹಮಾನ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಕೊಲಂಬೊ ಹೈಕೋರ್ಟ್ 24 ಮಿಲಿಯನ್ ಶ್ರೀಲಂಕಾ ರೂಪಾಯಿ (80,000 ಯುಎಸ್ ಡಾಲರ್) ದಂಡವನ್ನೂ ವಿಧಿಸಿದೆ.
ಶ್ರೀಲಂಕಾದಲ್ಲಿ ಕ್ರೀಡಾ ಭ್ರಷ್ಟಾಚಾರ ತಡೆಯಲು 2019ರಲ್ಲಿ ಜಾರಿಗೆ ತಂದ ಕಠಿಣ ಕಾನೂನಿನ ಅಡಿಯಲ್ಲಿ ಈ ಶಿಕ್ಷೆ ವಿಧಿಸಲಾಗಿದೆ.
ಆಟಗಾರನೊಬ್ಬ ನೀಡಿದ ದೂರಿನ ಮೇರೆಗೆ 2024ರಲ್ಲಿ ದುಬೈಗೆ ವಿಮಾನ ಹತ್ತಲು ಯತ್ನಿಸುತ್ತಿದ್ದಾಗ ರೆಹಮಾನ್ ಅವರನ್ನು ಕೊಲಂಬೊ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗುವ ಮುನ್ನ ಅವರು ಹಲವು ವಾರಗಳ ಕಾಲ ಕಸ್ಟಡಿಯಲ್ಲಿ ಇದ್ದರು.





