ಆಸಿಸ್ ಬೌಲರ್ ಮ್ಯಾಥ್ಯೂ ಕಹ್ನೆಮನ್ ಬೌಲಿಂಗ್ ಶೈಲಿ ಅಕ್ರಮ?
ಗಾಲೆ ಟೆಸ್ಟ್ ಪಂದ್ಯದ ಅಂಪೈರ್ಗಳಿಂದ ವರದಿ

ಮ್ಯಾಥ್ಯೂ ಕಹ್ನೆಮನ್ | PC : X
ದುಬೈ: ಕಳೆದ ವಾರ ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ವೇಳೆ ಆಸ್ಟ್ರೇಲಿಯದ ಬೌಲರ್ ಮ್ಯಾಥ್ಯೂ ಕಹ್ನೆಮನ್ ಸಂಶಯಾಸ್ಪದ ಅಕ್ರಮ ಬೌಲಿಂಗ್ ನಡೆಸಿದ್ದಾರೆ ಎಂಬುದಾಗಿ ವರದಿ ಮಾಡಲಾಗಿದೆ.
ಕಹ್ನೆಮನ್ ಗಾಲೆಯಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಿಂದ 16 ವಿಕೆಟ್ಗಳನ್ನು ಪಡೆದಿದ್ದಾರೆ. ಎರಡನೇ ಪಂದ್ಯದ ಬಳಿಕ, ಅವರ ಸಂಶಯಾಸ್ಪದ ಅಕ್ರಮ ಬೌಲಿಂಗ್ ಬಗ್ಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ವರದಿ ಮಾಡಲಾಗಿದೆ ಎನ್ನುವುದನ್ನು ಕ್ರಿಕೆಟ್ ಆಸ್ಟ್ರೇಲಿಯ ಖಚಿತಪಡಿಸಿದೆ.
ಇನ್ನು, ತನ್ನ ಬೌಲಿಂಗ್ ಶೈಲಿ ಸಕ್ರಮವೇ ಎನ್ನುವುದನ್ನು ನಿರ್ಧರಿಸಲು ಬೌಲಿಂಗ್ ವಿಶ್ಲೇಷಣೆಗೆ ಒಳಗಾಗಬೇಕಾಗಿದೆ. ವಿಶ್ಲೇಷಣೆಯಲ್ಲಿ ಅವರ ಬೌಲಿಂಗ್ ಶೈಲಿ ಅಕ್ರಮ ಎಂಬುದಾಗಿ ಪರಿಗಣಿಸಲ್ಪಟ್ಟರೆ ಅವರನ್ನು ಕ್ರಿಕೆಟ್ನಿಂದ ಅಮಾನತಿನಲ್ಲಿಡಲಾಗುವುದು. ಅವರ ಬೌಲಿಂಗ್ ಶೈಲಿಯು ಸುಧಾರಿಸುವವರೆಗೆ ಹಾಗೂ ಬೌಲಿಂಗ್ ವಿಶ್ಲೇಷಣೆಯಲ್ಲಿ ಅವರು ತೇರ್ಗಡೆಗೊಳ್ಳುವವರೆಗೆ ಅವರು ಅಮಾನತಿನಲ್ಲಿರುತ್ತಾರೆ.
ಈಗ ದೇಶಿ ಕ್ರಿಕೆಟ್ನಲ್ಲಿ, ತಾಸ್ಮೇನಿಯ ಪರವಾಗಿ ಆಡುವುದನ್ನು ಮುಂದುವರಿಸಲು ಕಹ್ನೆಮನ್ಗೆ ಅನುಮತಿ ನೀಡಲಾಗಿದೆ. ಆದರೆ, ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ಆಡುವಂತಿಲ್ಲ.
‘‘ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಬಳಿಕ, ಪಂದ್ಯದ ಅಧಿಕಾರಿಗಳು ಕಹ್ನೆಮನ್ರ ಬೌಲಿಂಗ್ ಶೈಲಿಯ ಬಗ್ಗೆ ವರದಿ ಮಾಡಿರುವುದನ್ನು ಆಸ್ಟ್ರೇಲಿಯ ತಂಡಕ್ಕೆ ತಿಳಿಸಲಾಗಿದೆ. ಈ ಆರೋಪದಿಂದ ಹೊರಬರುವ ಪ್ರಕ್ರಿಯೆಯಲ್ಲಿ ಕಹ್ನೆಮನ್ರಿಗೆ ಬೆಂಬಲ ನೀಡುತ್ತೇವೆ’’ ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿಕೆಯೊಂದರಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.
ಮ್ಯೂಥ್ಯೂ, 2017ರಲ್ಲಿ ಚೊಚ್ಚಲ ಪಂದ್ಯವಾಡಿದಂದಿನಿಂದ 124 ವೃತ್ತಿಪರ ಪಂದ್ಯಗಳನ್ನು ಆಡಿದ್ದಾರೆ. ಅವುಗಳಲ್ಲಿ ಐದು ಟೆಸ್ಟ್ ಪಂದ್ಯಗಳು ಮತ್ತು ನಾಲ್ಕು ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳು. ಅವರು 2018ರಿಂದ 55 ಬಿಗ್ ಬ್ಯಾಶ್ ಲೀಗ್ ಪಂದ್ಯಗಳನ್ನು ಆಡಿದ್ದಾರೆ.
ಐಸಿಸಿ ಶಿಷ್ಟಾಚಾರಗಳ ಪ್ರಕಾರ, ಓರ್ವ ಬೌಲರ್ ಬೌಲಿಂಗ್ ಮಾಡುವಾಗ ಅವರ ಮೊಣಕೈ 15 ಡಿಗ್ರಿಗಿಂತ ಹೆಚ್ಚು ಬಾಗಿದರೆ ಅದನ್ನು ಅಕ್ರಮ ಬೌಲಿಂಗ್ ಶೈಲಿ ಎಂಬುದಾಗಿ ಪರಿಗಣಿಸಲಾಗುತ್ತದೆ. ಇಂಥ ಬೌಲರ್ಗಳ ಶೈಲಿಯನ್ನು, ಮಾನವ ಚಲನೆ ವಿಜ್ಞಾನ ಪರಿಣತರ ಮೇಲುಸ್ತುವಾರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಐಸಿಸಿ ಪ್ರಮಾಣಿತ ಪರೀಕ್ಷಾ ಕೇಂದ್ರಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ.







