FIFA 2026 | ಎರಡು ಬಾರಿ ʼಗೋಲ್ಡನ್ ಬೂಟ್ʼ ಗೆದ್ದ ಮೊದಲ ಆಟಗಾರ ಎಂಬಾಪೆ

ಕೈಲಿಯನ್ ಎಂಬಾಪೆ ಮತ್ತು ಉನೈ ಸಿಮೋನ್ (Photo credit: PTI)
ನ್ಯೂಜೆರ್ಸಿ: 2026ರ ಫಿಫಾ ವಿಶ್ವಕಪ್ ನಲ್ಲಿ ಅಗ್ರ ಗೋಲು ಸ್ಕೋರರ್ಗೆ ನೀಡಲಾಗುವ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಫ್ರಾನ್ಸ್ ನ ಸ್ಟಾರ್ ಫಾರ್ವರ್ಡ್ ಕೈಲಿಯನ್ ಎಂಬಾಪೆ ತಮ್ಮದಾಗಿಸಿಕೊಂಡಿದ್ದು, ಎರಡು ಬಾರಿ ಈ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.
2022ರ ಖತರ್ ವಿಶ್ವಕಪ್ ನಲ್ಲಿ ಎಂಟು ಗೋಲುಗಳೊಂದಿಗೆ ಗೋಲ್ಡನ್ ಬೂಟ್ ಗೆದ್ದಿದ್ದ ಎಂಬಾಪೆ, 2026ರ ಟೂರ್ನಿಯಲ್ಲೂ ಎಂಟು ಪಂದ್ಯಗಳಲ್ಲಿ 10 ಗೋಲುಗಳನ್ನು ದಾಖಲಿಸುವ ಮೂಲಕ ಮತ್ತೆ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದರು. ಈ ಮೂಲಕ ಸತತ ಎರಡು ವಿಶ್ವಕಪ್ ಗಳಲ್ಲಿ ಗೋಲ್ಡನ್ ಬೂಟ್ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1970ರಲ್ಲಿ ಪಶ್ಚಿಮ ಜರ್ಮನಿಯ ಗೆರ್ಡ್ ಮುಲ್ಲರ್ ಬಳಿಕ ಒಂದೇ ವಿಶ್ವಕಪ್ ಟೂರ್ನಿಯಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಗೋಲು ಗಳಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನೂ 27 ವರ್ಷದ ಎಂಬಾಪೆ ನಿರ್ಮಿಸಿದರು.
ಒಂದೇ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ, 1958ರಲ್ಲಿ ಫ್ರಾನ್ಸ್ ನ ಜಸ್ಟ್ ಫಾಂಟೈನ್ ದಾಖಲಿಸಿದ್ದ 13 ಗೋಲುಗಳು ಹಾಗೂ 1954ರಲ್ಲಿ ಹಂಗೇರಿಯ ಸ್ಯಾಂಡರ್ ಕೊಸಿಸ್ ದಾಖಲಿಸಿದ್ದ 11 ಗೋಲುಗಳ ನಂತರ, ಎಂಬಾಪೆ ಅವರ 10 ಗೋಲುಗಳ ಸಾಧನೆ ಮೂರನೇ ಅತ್ಯುತ್ತಮವಾಗಿದೆ.
ವಿಶ್ವಕಪ್ ಇತಿಹಾಸದಲ್ಲಿ ಒಟ್ಟು 22 ಗೋಲುಗಳೊಂದಿಗೆ ಪುರುಷರ ವಿಭಾಗದ ಸಾರ್ವಕಾಲಿಕ ಅಗ್ರ ಗೋಲು ಸ್ಕೋರರ್ ಆಗಿರುವ ಎಂಬಾಪೆ, ಲಿಯೋನೆಲ್ ಮೆಸ್ಸಿಯನ್ನು ಒಂದು ಗೋಲಿನಿಂದ ಹಿಂದಿಕ್ಕಿದ್ದಾರೆ.
ಶನಿವಾರ ನಡೆದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಎರಡು ಗೋಲುಗಳನ್ನು ದಾಖಲಿಸುವ ಮೂಲಕ ತಮ್ಮ ವಿಶ್ವಕಪ್ ಗೋಲುಗಳ ಸಂಖ್ಯೆಯನ್ನು 22ಕ್ಕೆ ಏರಿಸಿಕೊಂಡರು. ಆದರೂ, ಇಂಗ್ಲೆಂಡ್ ವಿರುದ್ಧ 4–6 ಗೋಲುಗಳಿಂದ ಸೋತ ಫ್ರಾನ್ಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಗುಂಪು ಹಂತದಲ್ಲಿ ಸೆನೆಗಲ್ ಮತ್ತು ಇರಾಕ್ ವಿರುದ್ಧ ತಲಾ ಎರಡು ಗೋಲು ಗಳಿಸಿದ್ದ ಎಂಬಾಪೆ, ಪ್ರೀ–ಕ್ವಾರ್ಟರ್ ಫೈನಲ್ ನಲ್ಲಿ ಸ್ವೀಡನ್ ವಿರುದ್ಧವೂ ಎರಡು ಬಾರಿ ಗುರಿ ಭೇದಿಸಿದರು. ನಂತರ ಪರಾಗ್ವೆ ವಿರುದ್ಧದ ಪಂದ್ಯದಲ್ಲಿ 70ನೇ ನಿಮಿಷದಲ್ಲಿ ಪೆನಾಲ್ಟಿಯಿಂದ ಗೋಲು ದಾಖಲಿಸಿದ ಅವರು, ಕ್ವಾರ್ಟರ್ಫೈನಲ್ ನಲ್ಲಿ ಮೊರಾಕ್ಕೋ ವಿರುದ್ಧವೂ ಗೋಲು ಗಳಿಸಿದರು.
ರವಿವಾರ ನಡೆದ ಫೈನಲ್ ನಲ್ಲಿ ಮೆಸ್ಸಿ ಹ್ಯಾಟ್ರಿಕ್ ಗಳಿಸಿದ್ದರೆ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಎಂಬಾಪೆಯನ್ನು ಹಿಂದಿಕ್ಕುವ ಅವಕಾಶವಿತ್ತು. ಆದರೂ, ಸ್ಪೇನ್ ವಿರುದ್ಧದ ಫೈನಲ್ ನಲ್ಲಿ ಅರ್ಜೆಂಟೀನಾ 0–1 ಗೋಲುಗಳಿಂದ ಸೋತ ಕಾರಣ, ಮೆಸ್ಸಿಗೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಎಂಟು ಪಂದ್ಯಗಳಲ್ಲಿ ಗಳಿಸಿದ ಗೋಲುಗಳ ಸಂಖ್ಯೆ ಎಂಬಾಪೆಗಿಂತ ಕಡಿಮೆಯೇ ಉಳಿಯಿತು.
ಅಗ್ರ ಸ್ಕೋರರ್ ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ನ ಜೂಡ್ ಬೆಲ್ಲಿಂಗ್ಹ್ಯಾಮ್ ಮತ್ತು ನಾರ್ವೆಯ ಎರ್ಲಿಂಗ್ ಹಾಲೆಂಡ್ ತಲಾ ಏಳು ಗೋಲುಗಳೊಂದಿಗೆ ನಂತರದ ಸ್ಥಾನ ಪಡೆದರೆ, ಫ್ರಾನ್ಸ್ ನ ಉಸ್ಮಾನ್ ಡೆಂಬೆಲೆ ಹಾಗೂ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ತಲಾ ಆರು ಗೋಲುಗಳನ್ನು ದಾಖಲಿಸಿದರು.
ಗೋಲ್ಡನ್ ಗ್ಲೋವ್ ಉನೈ ಸಿಮೋನ್ ಗೆ
ಸ್ಪೇನ್ ನ ಗೋಲ್ಕೀಪರ್ ಉನೈ ಸಿಮೋನ್, ಟೂರ್ನಿಯ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೋಲು ಮಾತ್ರ ಬಿಟ್ಟುಕೊಟ್ಟು ಏಳು ಕ್ಲೀನ್ ಶೀಟ್ ಗಳನ್ನು ದಾಖಲಿಸಿದ ಸಾಧನೆಗಾಗಿ ಅತ್ಯುತ್ತಮ ಗೋಲ್ಕೀಪರ್ ಗೆ ನೀಡಲಾಗುವ ಗೋಲ್ಡನ್ ಗ್ಲೋವ್ ಪ್ರಶಸ್ತಿಗೆ ಭಾಜನರಾದರು.
ಅಥ್ಲೆಟಿಕ್ ಕ್ಲಬ್ ಪರ ಆಡುವ 29 ವರ್ಷದ ಸೈಮನ್ ಅವರನ್ನು, ಆರ್ಸೆನಲ್ ನ ಡೇವಿಡ್ ರಾಯಾ ಬದಲಿಗೆ ಸ್ಪೇನ್ ನ ಮೊದಲ ಆಯ್ಕೆಯ ಗೋಲ್ಕೀಪರ್ ಆಗಿ ಮುಖ್ಯ ಕೋಚ್ ಲೂಯಿಸ್ ಡೆ ಲಾ ಫ್ಯೂಯೆಂಟೆ ಆಯ್ಕೆ ಮಾಡಿದ್ದರು. ಕ್ವಾರ್ಟರ್ ಫೈನಲ್ ನಲ್ಲಿ ಬೆಲ್ಜಿಯಂನ ಚಾರ್ಲ್ಸ್ ಡಿ ಕೆಟೆಲೇರೆ ಮಾತ್ರ ಅವರ ವಿರುದ್ಧ ಗೋಲು ದಾಖಲಿಸಲು ಯಶಸ್ವಿಯಾಗಿದ್ದರು.
ತರಬೇತುದಾರರ ನಂಬಿಕೆಯನ್ನು ಸಮರ್ಥಿಸಿಕೊಂಡ ಸೈಮನ್, ಸ್ಪೇನ್ ವಿಶ್ವಕಪ್ ಚಾಂಪಿಯನ್ ಆಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿ, ವೈಯಕ್ತಿಕ ಗೌರವವನ್ನೂ ತಮ್ಮದಾಗಿಸಿಕೊಂಡರು.






