ಎರಡು ಗೋಲು ಗಳಿಸಿದ ಎಂಬಾಪೆ : ಫ್ರಾನ್ಸ್ ತಂಡಕ್ಕೆ ಶರಣಾದ ಸೆನೆಗಲ್

ಕೈಲಿಯನ್ ಎಂಬಾಪೆ | Photo Credit : PTI
ನ್ಯೂ ಜೆರ್ಸಿ, ಜೂ.17: ಆಫ್ರಿಕಾದ ಬಲಿಷ್ಠ ತಂಡಗಳ ಪೈಕಿ ಒಂದಾದ ಸೆನೆಗಲ್ ವಿರುದ್ಧ 3-1 ಗೋಲುಗಳ ಅಂತರದಿಂದ ಜಯಶಾಲಿಯಾಗುವುದರೊಂದಿಗೆ ಫ್ರಾನ್ಸ್ ತಂಡವು ಫಿಫಾ ವಿಶ್ವಕಪ್ ಟೂರ್ನಿಯ ‘ಐ’ ಗುಂಪಿನ ಪಂದ್ಯದಲ್ಲಿ ತನ್ನ ಅಭಿಯಾನ ಆರಂಭಿಸಿದೆ.
ಈ ಪಂದ್ಯದಲ್ಲಿ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ ದ್ವಿತೀಯಾರ್ಧದಲ್ಲಿ ಅವಳಿ ಗೋಲು ಗಳಿಸಿ ಮಿಂಚಿದರು.
ಬುಧವಾರ ನಡೆದ ಪಂದ್ಯದ ಮೊದಲಾರ್ಧದಲ್ಲಿ ಟೂರ್ನಮೆಂಟ್ನ ಫೇವರಿಟ್ ಫ್ರಾನ್ಸ್ ವಿರುದ್ಧ ದಿಟ್ಟ ಹೋರಾಟ ನೀಡಿದ ಸೆನೆಗಲ್ ತಂಡ ಎಲ್ಲರ ಗಮನ ಸೆಳೆಯಿತು. ಮೊದಲಾರ್ಧದಲ್ಲಿ ಫ್ರಾನ್ಸ್ ತಂಡದಲ್ಲಿ ನಿರೀಕ್ಷಿತ ಆಕ್ರಮಣಕಾರಿ ಆಟ ಕಂಡುಬರಲಿಲ್ಲ. ಎಂಬಾಪೆ ಶಾಂತಚಿತ್ತದಿಂದ ಆಡಿದರು.
ಸತತ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ಗೆ ತಲುಪಿದ್ದ ಫ್ರಾನ್ಸ್ ತಂಡಕ್ಕೆ ನಾಯಕ ಎಂಬಾಪೆ ದ್ವಿತೀರ್ಯಾದಲ್ಲಿ ಅಗತ್ಯವಿರುವ ಸ್ಫೂರ್ತಿಯನ್ನು ತುಂಬಿದರು. 66ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 82ನೇ ನಿಮಿಷದಲ್ಲಿ ಗೋಲು ಗಳಿಸಿದ ಬ್ರಾಡ್ಲೀ, ಫ್ರಾನ್ಸ್ ತಂಡದ ಮುನ್ನಡೆಯನ್ನು ಹಿಗ್ಗಿಸಿದರು.
18ರ ವಯಸ್ಸಿನ ಇಬ್ರಾಹೀಂ ಎಂಬಾಯೆ 95ನೇ ನಿಮಿಷದಲ್ಲಿ ಸೆನೆಗಲ್ ತಂಡದ ಪರ ಸಮಾಧಾನಕರ ಗೋಲು ಗಳಿಸಿದರು. 96ನೇ ನಿಮಿಷದಲ್ಲಿ ಚಿತ್ತಾಕರ್ಷಕ ಗೋಲು ಗಳಿಸಿದ ಎಂಬಾಪೆ, ಫ್ರಾನ್ಸ್ಗೆ 3-1 ಅಂತರದ ಗೆಲುವು ತಂದುಕೊಟ್ಟರು.
ತನ್ನ 99ನೇ ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿದ ಎಂಬಾಪೆ ಅವರು ಫ್ರಾನ್ಸ್ನ ಸಾರ್ವಕಾಲಿಕ ಶ್ರೇಷ್ಠ ಗೋಲ್ಸ್ಕೋರರ್ ಒಲಿವಿಯೆರ್ ಗಿರೌಡ್(57 ಅಂತರ್ರಾಷ್ಟ್ರೀಯ ಗೋಲು)ದಾಖಲೆಯನ್ನು ಮುರಿದರು. ವಿಶ್ವಕಪ್ ಟೂರ್ನಿಯಲ್ಲಿ 14ನೇ ಗೋಲು ಗಳಿಸಿದ ಎಂಬಾಪೆ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಗೋಲು ಗಳಿಸಿದ ಫ್ರಾನ್ಸ್ನ ಜಸ್ಟ್ ಫಾಂಟೈನ್(13 ಗೋಲು) ದಾಖಲೆಯನ್ನು ಮುರಿದಿದ್ದಾರೆ. ಫಾಂಟೈನ್ 1958ರ ವಿಶ್ವಕಪ್ವೊಂದರಲ್ಲೇ 13 ಗೋಲುಗಳನ್ನು ಗಳಿಸಿದ್ದು, ಈ ದಾಖಲೆ ದೀರ್ಘಕಾಲದಿಂದ ಉಳಿದುಕೊಂಡಿದೆ.
ವಿಶ್ವಕಪ್ನಲ್ಲಿ 14ನೇ ಗೋಲು ಗಳಿಸಿದ ಎಂಬಾಪೆ ಅವರು ಪಂದ್ಯಾವಳಿಯ ಸ್ಕೋರಿಂಗ್ ಪಟ್ಟಿಯಲ್ಲಿ ಬ್ರೆಝಿಲ್ ದಂತಕತೆ ಪೀಲೆ ದಾಖಲೆಯನ್ನು ಹಿಂದಿಕ್ಕಿದರು.
ಮೂರು ಅಂಕ ಗಳಿಸಿ ‘ಐ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಫ್ರಾನ್ಸ್ ತಂಡವು ಮುಂದಿನ ಗ್ರೂಪ್ ಹಂತದ ಪಂದ್ಯದಲ್ಲಿ ಇರಾಕ್ ತಂಡವನ್ನು ಎದುರಿಸಲಿದೆ.
ಕೈಲಿಯನ್ ಎಂಬಾಪೆ ನಿರ್ಮಿಸಿದ ದಾಖಲೆಗಳು
58ನೇ ಅಂತರ್ರಾಷ್ಟ್ರೀಯ ಗೋಲು ಗಳಿಸಿದ ಎಂಬಾಪೆ ಫ್ರಾನ್ಸ್ ತಂಡದ ಸಾರ್ವಕಾಲಿಕ ಶ್ರೇಷ್ಠ ಗೋಲ್ಸ್ಕೋರರ್ ಎನಿಸಿಕೊಂಡರು. ಈ ಹಿಂದಿನ ಒಲಿವಿಯೆರ್ ಗಿರೌಡ್ರ ದಾಖಲೆ(57)ಮುರಿದರು.
ವಿಶ್ವಕಪ್ ಟೂರ್ನಿಯಲ್ಲಿ 14ನೇ ಗೋಲು ಗಳಿಸಿದ ಎಂಬಾಪೆ ವಿಶ್ವಕಪ್ನಲ್ಲಿ ಫ್ರಾನ್ಸ್ನ ಸಾರ್ವಕಾಲಿಕ ಶ್ರೇಷ್ಠ ಗೋಲ್ಸ್ಕೋರರ್ ಎನಿಸಿಕೊಂಡರು.
ಸಾರ್ವಕಾಲಿಕ ಶ್ರೇಷ್ಠ ವಿಶ್ವಕಪ್ ಸ್ಕೋರಿಂಗ್ ದಾಖಲೆ(16)ಸರಿಗಟ್ಟಲು ಎಂಬಾಪೆಗೆ ಎರಡು ಗೋಲುಗಳ ಅಗತ್ಯವಿದೆ.
ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಗೋಲ್ಸ್ಕೋರರ್ ಎನಿಸಿಕೊಳ್ಳಲು ಇನ್ನು ಮೂರು ವಿಶ್ವಕಪ್ ಗೋಲುಗಳ ಅಗತ್ಯವಿದೆ.
ಫಿಫಾ ವಿಶ್ವಕಪ್ ಫೈನಲ್ನಲ್ಲಿ ಈಗಾಗಲೇ ಗರಿಷ್ಠ ಸ್ಕೋರ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿರುವ ಎಂಬಾಪೆ, ಒಂದು ವೇಳೆ ಫ್ರಾನ್ಸ್ ತಂಡವು ಮತ್ತೊಮ್ಮೆ ಫೈನಲ್ಗೆ ತಲುಪಿದರೆ ದಾಖಲೆಯನ್ನು ವಿಸ್ತರಿಸಬಹುದು.






