ವಾಂಖೇಡೆ ಕ್ರೀಡಾಂಗಣದ ಲಾಂಜ್ಗಳಿಗೆ ತೆಂಡುಲ್ಕರ್, ಅಜಿಂಕ್ಯ ರಹಾನೆ ಹೆಸರಿಡಲು MCA ನಿರ್ಧಾರ

ಅಜಿಂಕ್ಯ ರಹಾನೆ , ಸಚಿನ್ ತೆಂಡುಲ್ಕರ್| Photo Credit : PTI
ಮುಂಬೈ: ಮುಂಬೈನ ಐತಿಹಾಸಿಕ ವಾಂಖೇಡೆ ಕ್ರೀಡಾಂಗಣದ ಲಾಂಜ್ಗಳಿಗೆ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ಅಜಿಂಕ್ಯ ರಹಾನೆ ಮತ್ತು ದಿವಂಗತ ಮಾಧವ್ ಮಂತ್ರಿ ಅವರ ಹೆಸರಿಡಲು ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಶುಕ್ರವಾರ ತೀರ್ಮಾನಿಸಿದೆ. ಅದೂ ಅಲ್ಲದೆ, ತನ್ನ ಸಂಯೋಜಿತ ಕ್ಲಬ್ಗಳಿಗೆ ನೀಡುವ ಸಹಾಯಧನ ನಿಧಿಯನ್ನು ಮುಂದಿನ 10 ವರ್ಷಗಳ ಅವಧಿಗೆ 500 ಕೋಟಿ ರೂಪಾಯಿಗೆ ಹೆಚ್ಚಿಸುವ ನಿರ್ಧಾರವನ್ನೂ ಅದು ತೆಗೆದುಕೊಂಡಿದೆ.
ಅಸೋಸಿಯೇಶನ್ನ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಎಲ್ಲಾ ಸಂಯೋಜಿತ ಕ್ಲಬ್ಗಳ ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಈ ವರ್ಷದ ಎಪ್ರಿಲ್ನಲ್ಲಿ ಎಮ್ಸಿಎಯ ಕಾರ್ಯಕಾರಿ ಮಂಡಳಿಯು ರೂ.100 ಕೋಟಿ ಸಹಾಯಧನ ನಿಧಿ ಸ್ಥಾಪನೆಗೆ ಅನುಮೋದನೆ ನೀಡಿತ್ತು.
ಸಹಾಯಧನ ನಿಧಿಗೆ ಪ್ರತಿ ವರ್ಷ 40 ಕೋಟಿ ರೂ.ಯನ್ನು ಒದಗಿಸಲಾಗುವುದು ಹಾಗೂ ಮುಂದಿನ 10 ವರ್ಷಗಳಲ್ಲಿ ಮೊತ್ತವು 500 ಕೋಟಿ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ಅಸೋಸಿಯೇಶನ್ ಅಧ್ಯಕ್ಷ ಅಜಿಂಕ್ಯ ನಾಯ್ಕ್ ತಿಳಿಸಿದರು.
ತೆಂಡುಲ್ಕರ್ ಮತ್ತು ಇತ್ತೀಚೆಗಷ್ಟೇ ನಿವೃತ್ತರಾಗಿರುವ ರಹಾನೆ ಹಾಗೂ ಭಾರತದ ಪರ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿರುವ ಮುಂಬೈ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅಸೋಸಿಯೇಶನ್ನ ಮಾಜಿ ಅಧ್ಯಕ್ಷರಾ ದಿವಂಗತ ಮಾಧವ್ ಮಂತ್ರಿ ಅವರ ಹೆಸರುಗಳನ್ನು ವಾಂಖೇಡೆ ಕ್ರೀಡಾಂಗಣದ ಲಾಂಜ್ಗಳಿಗೆ ಇಡಲಾಗುವುದು ಎಂದು ಅವರು ನುಡಿದರು.
‘‘ಅವರಿಗಾಗಿ ಪ್ರತ್ಯೇಕ ಲಾಂಜ್ ಒಂದನ್ನು ಒದಗಿಸಲು ನಾವು ನಿರ್ಧರಿಸಿದ್ದೇವೆ. ಇದಕ್ಕಾಗಿ ಕಾರ್ಯದರ್ಶಿಗಳನ್ನೊಳಗೊಂಡ ಮೂವರು ಸದಸ್ಯರ ಸಮಿತಿಯನ್ನು ನೇಮಿಸಲಾಗಿದೆ’’ ಎಂದು ನಾಯ್ಕ್ ತಿಳಿಸಿದರು.






