39ನೇ ರಾಷ್ಟ್ರೀಯ ಗೇಮ್ಸ್ ಗೆ ಮೇಘಾಲಯ ಆತಿಥ್ಯ: ಖಚಿತಪಡಿಸಿದ ಐಒಎ

PC : X
ಚೆನ್ನೈ: ಮೇಘಾಲಯ ರಾಜ್ಯಕ್ಕೆ 39ನೇ ಆವೃತ್ತಿಯ ರಾಷ್ಟ್ರೀಯ ಗೇಮ್ಸ್ ಆತಿಥ್ಯದ ಹಕ್ಕನ್ನು ನೀಡಲಾಗಿದೆ. ಫೆ.10ರಂದು ಮುಖ್ಯಮಂತ್ರಿ ಕೊನ್ರಾಡ್ ಕೆ.ಸಂಗ್ಮಾಗೆ ಬರೆದ ಪತ್ರದಲ್ಲಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ)ಇದನ್ನು ದೃಢಪಡಿಸಿದೆ.
‘ಈ ನಿರ್ಧಾರವು ಕ್ರೀಡೆಗಳನ್ನು ಉತ್ತೇಜಿಸುವ ಮೇಘಾಲಯದ ಬದ್ಧತೆ ಹಾಗೂ ಪ್ರತಿಷ್ಠಿತ ಬಹು ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸುವ ಸಾಮರ್ಥ್ಯಕ್ಕೆ ಒಂದು ಮನ್ನಣೆಯಾಗಿದೆ. ಮೇಘಾಲಯವು ಈ ಸಂದರ್ಭಕ್ಕೆ ತಕ್ಕಂತೆ ಕ್ರೀಡಾಕೂಟದ ಯಶಸ್ವಿ ಹಾಗೂ ಸ್ಮರಣೀಯ ಆವೃತ್ತಿ ನೀಡಲಿದೆ ಎಂಬ ವಿಶ್ವಾಸ ನಮಗಿದೆ. ಸ್ಪರ್ಧೆಯು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಲು ಐಒಎ ಅಗತ್ಯವಿರುವ ಎಲ್ಲ ಬೆಂಬಲ ಹಾಗೂ ಮಾರ್ಗದರ್ಶನವನ್ನು ನೀಡುತ್ತದೆ’ ಎಂದು ಐಒಎ ತಿಳಿಸಿದೆ.
ಮುಂದಿನ ಆವೃತ್ತಿಯ ಗೇಮ್ಸ್ 2027ರ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ನಡೆಯಲಿದೆ.
ಫೆಬ್ರವರಿ 14ರಂದು ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆಯಲಿರುವ 38ನೇ ಆವೃತ್ತಿಯ ರಾಷ್ಟ್ರೀಯ ಗೇಮ್ಸ್ ಸಮಾರೋಪ ಸಮಾರಂಭದಲ್ಲಿ ಮೇಘಾಲಯಕ್ಕೆ ವಿಧ್ಯಕ್ತವಾಗಿ ಐಒಎ ಧ್ವಜವನ್ನು ಹಸ್ತಾಂತರಿಸಲಾಗುತ್ತದೆ.





