FIFA 2026 | ಮೆಸ್ಸಿಯ ದಾಖಲೆಯ ಹ್ಯಾಟ್ರಿಕ್ ಗೋಲು: ಅರ್ಜೆಂಟೀನಾ ತಂಡಕ್ಕೆ 3-0 ಅಂತರದ ಗೆಲುವು

ಲಿಯೊನೆಲ್ ಮೆಸ್ಸಿ (Photo credit: X/@FIFAWorldCup)
ಕಾನ್ಸಾಸ್ ಸಿಟಿ: ಲಿಯೊನೆಲ್ ಮೆಸ್ಸಿಯ ದಾಖಲೆಯ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು 3-0 ಅಂತರದಿಂದ ಅಲ್ಜೀರಿಯಾ ತಂಡವನ್ನು ಸೋಲಿಸಿತು.
ಈ ಮೂರು ಗೋಲುಗಳೊಂದಿಗೆ ಮೆಸ್ಸಿ, ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮಿರೊಸ್ಲಾವ್ ಕ್ಲೋಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
38 ವರ್ಷದ ಮೆಸ್ಸಿ ತಮ್ಮ 200ನೇ ಅಂತರರಾಷ್ಟ್ರೀಯ ಪಂದ್ಯ ಮತ್ತು ದಾಖಲೆಯ ಆರನೇ ವಿಶ್ವಕಪ್ ಆಟವನ್ನು ಅದ್ಭುತ ಹ್ಯಾಟ್ರಿಕ್ ಮೂಲಕ ಸ್ಮರಣೀಯವಾಗಿಸಿದರು.
ಪಂದ್ಯದ ಆರಂಭದಲ್ಲಿ ಅರ್ಜೆಂಟೀನಾದ ಸ್ವಲ್ಪ ಅಸ್ಥಿರವಾಗಿ ಕಂಡುಬಂದರೂ, ಲಿಯೊನೆಲ್ ಮೆಸ್ಸಿ ಶೀಘ್ರವೇ ಆಟದ ಮೇಲೆ ಹಿಡಿತ ಸಾಧಿಸಿದರು. ಪಂದ್ಯದ ಆರಂಭಿಕ ಹಂತದಲ್ಲಿ ಅರ್ಜೆಂಟೀನಾ ತಂಡವು ಸಾಕಷ್ಟು ಒತ್ತಡದಲ್ಲಿತ್ತು. ಐದನೇ ನಿಮಿಷದಲ್ಲಿ ಮೆಸ್ಸಿ ಗೋಲು ಬಾರಿಸಿದ್ದರೂ, ಆಫ್ ಸೈಡ್ ಆಗಿದ್ದರಿಂದ ಆ ಗೋಲು ನಿರಾಕರಿಸಲ್ಪಟ್ಟಿತು. ಬಳಿಕ ಅಲ್ಜೀರಿಯಾ ತಂಡದ ಫಾರಿಸ್ ಚಾಯಿಬ್ ಗಳಿಸಿದ ಗೋಲು ಕೂಡಾ ಆಫ್ಸೈಡ್ ಎಂದು ಅಮಾನ್ಯಗೊಂಡಿತು.
ಬಳಿಕ ಅಲ್ಜೀರಿಯಾ ತಂಡವು ಅರ್ಜೆಂಟೀನಾದ ಆಟದ ತೀವ್ರತೆಗೆ ತಕ್ಕ ಸ್ಪರ್ಧೆ ನೀಡಿತು ಮತ್ತು ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸಿತು. ಪಂದ್ಯದ 17 ನೇ ನಿಮಿಷದಲ್ಲಿ ಮೆಸ್ಸಿ ಮೊದಲ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ದ್ವಿತೀಯ ಅವಧಿಯ 60ನೇ ನಿಮಿಷದಲ್ಲಿ ಗೋಲ್ಕೀಪರ್ ತಡೆದ ಚೆಂಡು ವಾಪಾಸು ಬಂದಾಗ ತಕ್ಷಣ ಪ್ರತಿಕ್ರಿಯಿಸಿದ ಮೆಸ್ಸಿ 2ನೇ ಗೋಲು ಗಳಿಸಿದರು.
76ನೇ ನಿಮಿಷಗಳಲ್ಲಿ ನಿಕೋಲಸ್ ಗೊನ್ಜಾಲೆಜ್ ನೀಡಿದ ಪಾಸ್ ಅನ್ನು ಮೆಸ್ಸಿ ಅತ್ಯಂತ ಶಕ್ತಿಯುತವಾದ ಶಾಟ್ ಮೂಲಕ ಗುರಿಯತ್ತ ತಲುಪಿಸಿದರು. ಇದರೊಂದಿಗೆ ಅವರು ತಮ್ಮ ವೃತ್ತಿಜೀವನದ ಮೊದಲ ವಿಶ್ವಕಪ್ ಹ್ಯಾಟ್ರಿಕ್ ಸಾಧನೆಯನ್ನು ಪೂರ್ಣಗೊಳಿಸಿದರು.
ಮೆಸ್ಸಿ ಅವರ ಈ ಹ್ಯಾಟ್ರಿಕ್ನೊಂದಿಗೆ ಅವರ ವಿಶ್ವಕಪ್ ಗೋಲುಗಳ ಸಂಖ್ಯೆ 16ಕ್ಕೇರಿದ್ದು, ಪುರುಷರ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ದಿಗ್ಗಜ ಮಿರೊಸ್ಲಾವ್ ಕ್ಲೋಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದಾಗ್ಯೂ, ಕ್ಲೋಸ್ ಅವರು ಈ ಸಾಧನೆಯನ್ನು ಮೆಸ್ಸಿಗಿಂತ ಕಡಿಮೆ ಪಂದ್ಯಗಳಲ್ಲಿ ಮಾಡಿದ್ದರು.






