ಮುಂಬೈ ಇಂಡಿಯನ್ಸ್ ಗೆ ಎರಡನೇ ಬಾರಿ ಡಬ್ಲ್ಯೂಪಿಎಲ್ ಕಿರೀಟ
ಮೂರನೇ ಬಾರಿಯೂ ಫೈನಲ್ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್

Photo: x/@wplt20
ಮುಂಬೈ : ಇಲ್ಲಿನ ಬ್ರಾಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಆವೃತ್ತಿಯ ಡಬ್ಲ್ಯೂಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಸಿದ ಮುಂಬೈ ಇಂಡಿಯನ್ಸ್ ಮಹಿಳಾ ತಂಡವು ಎರಡನೇ ಬಾರಿಗೆ ಚಾಂಪಿಯನ್ ಆಗಿದೆ. ಆ ಮೂಲಕ ಮೂರನೇ ಬಾರಿಯೂ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋತಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡವು ಮುಂಬೈ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಮುಂಬೈ ಪರವಾಗಿ ನಾಯಕಿ ಹರ್ಮನ್ ಪ್ರೀತ್ ಕೌರ್ 66 ರನ್ ಗಳಿಸಿದರು. 44 ಎಸೆತ ಎದುರಿಸಿದ ಅವರು 9 ಬೌಂಡರಿ ಸಹಿತ 2 ಸಿಕ್ಸರ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
150 ರನ್ ಗಳ ಗುರಿ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ಗಳು ಬೇಗನೇ ಉದುರಿ ತಂಡ ಸಂಕಷ್ಟಕ್ಕೆ ಸಿಲುಕಿತು. 44 ರನ್ ಗಳಿಸುವಷ್ಟರಲ್ಲಿ ಡೆಲ್ಲಿ ತಂಡವು 4 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಮರಿಝಾನ್ನೆ ಕಪ್ಪ್ ಅವರು ರಕ್ಷಣಾತ್ಮಕ ಹೋರಾಟದ ಆಟವು ಗೆಲುವಿನ ದಡ ಸೇರುವ ಭರವಸೆ ಮೂಡಿಸಿತು. ಆದರೆ ಮರಿಝಾನ್ನೆ 40 ರನ್ ಗೆ ವಿಕೆಟ್ ಒಪ್ಪಿಸಿದಾಗ ಡೆಲ್ಲಿ ತಂಡಕ್ಕೆ ಫೈನಲ್ ನಲ್ಲಿ ಮೂರನೇ ಬಾರಿಯೂ ಸೋಲು ಖಚಿತವಾಗುವ ಮುನ್ಸೂಚನೆ ದೊರೆಯಿತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 8 ರನ್ ಗಳಿಂದ ಸೋಲೊಪ್ಪಿಕೊಂಡಿತು.
ಮುಂಬೈ ಪರವಾಗಿ ನಾಟ್ ಸಿವೇರ್ ಬ್ರುನ್ಟ್ ಅವರು ಮೂರು ವಿಕೆಟ್ ಪಡೆದರು. ಅಮೇಲಿಯ ಕೆರ್ 2 ವಿಕೆಟ್ ಪಡೆದರೆ, ಶಬ್ನಿಮ್ ಇಸ್ಮಾಯೀಲ್, ಹೆಲೆ ಮ್ಯಾಥ್ಯೂಸ್, ಸೈಕಾ ಇಶಾಖ್ ತಲಾ ಒಂದು ವಿಕೆಟ್ ಪಡೆದರು.
ಡೆಲ್ಲಿ ಕ್ಯಾಪಿಟಲ್ಸ್ ಈ ಸೋಲಿನೊಂದಿಗೆ ಮೂರನೇ ಬಾರಿಗೆ ಡಬ್ಲ್ಯೂಪಿಎಲ್ ಫೈನಲ್ ನಲ್ಲಿ ಸೋತಿದೆ. 2023ರ ಮೊದಲ ಆವೃತ್ತಿಯಿಂದ ಡೆಲ್ಲಿ ತಂಡವು ಫೈನಲ್ ತಲುಪಿತ್ತು. ಮೊದಲ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿತು. 2024ರ ಎರಡನೇ ಆವೃತ್ತಿಯಲ್ಲಿ ಆರ್ ಸಿ ಬಿ ವಿರುದ್ಧ ಸೋಲೊಪ್ಪಿಕೊಂಡಿತು. ಈ ಬಾರಿ ಮೂರನೇ ಆವೃತ್ತಿಯಲ್ಲಿ ಮುಂಬೈ ವಿರುದ್ಧ ಮತ್ತೆ ಸೋತಿತು.







