ಮಯಾಮಿ ಓಪನ್: ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಫೈನಲ್ ಗೆ

ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ |Photo: X \ @airnewsalerts
ಮಯಾಮಿ: ಭಾರತೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಆಸ್ಟ್ರೇಲಿಯದ ತನ್ನ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ರೊಂದಿಗೆ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ ರಾತ್ರಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸ್ಪೇನ್-ಅರ್ಜೆಂಟೀನದ ಮಾರ್ಸೆಲೊ ಗ್ರ್ಯಾನೊಲರ್ಸ್ ಹಾಗೂ ಹೊರಾಸಿಯೊ ಝೆಬಲ್ಲೊಸ್ ವಿರುದ್ಧ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಬೋಪಣ್ಣ ಹಾಗೂ ಎಬ್ಡೆನ್ 6-1, 6-4 ನೇರ ಸೆಟ್ ಗಳ ಅಂತರದಿಂದ ಜಯ ಸಾಧಿಸಿದರು.
ದುಬೈ ಚಾಂಪಿಯನ್ಶಿಪ್ ಹಾಗೂ ಇಂಡಿಯನ್ ವೆಲ್ಸ್ ಮಾಸ್ಟರ್ಸ್ನಿಂದ ಬೇಗನೆ ನಿರ್ಗಮಿಸಿದ್ದ ಬೋಪಣ್ಣ ಅವರು ಡಬಲ್ಸ್ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದರು. ಮಯಾಮಿಯಲ್ಲಿ ಸೆಮಿ ಫೈನಲ್ ನಲ್ಲಿ ಗೆದ್ದಿರುವ ಬೋಪಣ್ಣ ಸೋಮವಾರ ಬಿಡುಗಡೆಯಾಗಲಿರುವ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೆ ಮರಳಲಿದ್ದಾರೆ.
ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ನಲ್ಲಿ ಡಬಲ್ಸ್ ಪ್ರಶಸ್ತಿ ಜಯಿಸಿದ ನಂತರ ಬೋಪಣ್ಣ ವಿಶ್ವದ ನಂ.1 ಸ್ಥಾನಕ್ಕೇರಿದ್ದರು. 44ರ ಹರೆಯದ ಬೋಪಣ್ಣ ತನ್ನ ವಯಸ್ಸನ್ನು ಲೆಕ್ಕಿಸದೆ ಟೆನಿಸ್ ಅಂಗಣದಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದಾರೆ.
ಮುಂಬರುವ ಫೈನಲ್ ಪಂದ್ಯದಲ್ಲಿ ಬೋಪಣ್ಣ ಹಾಗೂ ಎಬ್ಡೆನ್ ಕ್ರೊಯೇಶಿಯದ ಇವಾನ್ ಡೊಡಿಗ್ ಹಾಗೂ ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ ಅವರಿಂದ ಕಠಿಣ ಸವಾಲು ಎದುರಿಸುತ್ತಿದ್ದಾರೆ.
ಬೋಪಣ್ಣ 14ನೇ ಬಾರಿ ಎಟಿಪಿ ಮಾಸ್ಟರ್ಸ್-1000 ಟೂರ್ನಿಯಲ್ಲಿ ಫೈನಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮಯಾಮಿಯಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದಾರೆ. ಬೋಪಣ್ಣ ಹಾಗೂ ಎಬ್ಡೆನ್ ಎಟಿಪಿ ಮಾಸ್ಟರ್ಸ್-1000 ಟೂರ್ನಿಯಲ್ಲಿ 5ನೇ ಬಾರಿ ಫೈನಲ್ನಲ್ಲಿ ಸ್ಪರ್ಧಿಸಲಿದ್ದಾರೆ.







