‘ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್’ಗೆ ಮೈಕಲ್ ಬೆವನ್ ಸೇರ್ಪಡೆ

Image: X
ಮೆಲ್ಬರ್ನ್: ಆಸ್ಟ್ರೇಲಿಯದ ಏಕದಿನ ಕ್ರಿಕೆಟ್ ಲೆಜೆಂಡ್ ಮೈಕಲ್ ಬೆವನ್ರನ್ನು ‘ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್’ಗೆ ಆಯ್ಕೆ ಮಾಡಲಾಗಿದೆ.
ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್ ಸಮಿತಿ ಹಾಗೂ ಮೆಲ್ಬರ್ನ್ ಕ್ರಿಕೆಟ್ ಮೈದಾನ(ಎಂಸಿಜಿ)ನೋಡಿಕೊಳ್ಳುತ್ತಿರುವ ಮೆಲ್ಬರ್ನ್ ಕ್ಲಬ್ ಕ್ಲಬ್, ಆಯಾ ಯುಗಗಳಲ್ಲಿ ಲಭ್ಯವಿರುವ ಎಲ್ಲ ಆಟದ ಸ್ವರೂಪಗಳಿಗೆ ಸಮಾನ ಮನ್ನಣೆ ನೀಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾನದಂಡಗಳನ್ನು ಪರಿಶೀಲಿಸಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ(ಸಿಎ)ತಿಳಿಸಿದೆ.
ಪರಿಷ್ಕೃತ ಮಾನದಂಡಗಳ ಅಡಿಯಲ್ಲಿ ಈಗ ಎರಡು ವಿಭಾಗಗಳಾದ ಆಟಗಾರರ ವರ್ಗ ಹಾಗೂ ಸಾಮಾನ್ಯ ವರ್ಗದಲ್ಲಿ ಅಭ್ಯರ್ಥಿಗಳನ್ನು ‘ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್’ಗೆ ಸೇರಿಸಲು ಅನುವು ಮಾಡಿಕೊಡುತ್ತದೆ. ಮೈಕಲ್ ಕ್ಲಾರ್ಕ್ ಹಾಗೂ ಕ್ರಿಸ್ಟಿನಾ ಮ್ಯಾಥ್ಯೂಸ್ ನಂತರ ಬೆವನ್ ಈ ಋತುವಿನಲ್ಲಿ ‘ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್’ಗೆ ಸೇರ್ಪಡೆಗೊಂಡ ಮೂರನೇ ಆಟಗಾರರಾಗಿದ್ದಾರೆ. ಬೆವನ್ ಅವರು ಗೌರವಾನ್ವಿತ ಕ್ಲಬ್ಗೆ ಸೇರಿದ 66ನೇ ಆಟಗಾರನಾಗಿದ್ದಾರೆ.
ಬೆವನ್ 1999ರಿಂದ 2002ರ ತನಕ ಸತತ 1,259 ದಿನಗಳ ಕಾಲ ಪುರುಷರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿದ್ದರು. 232 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 53.58ರ ಸರಾಸರಿಯಲ್ಲಿ 48 ಅರ್ಧಶತಕ ಹಾಗೂ ಆರು ಶತಕಗಳ ಸಹಿತ 6,912 ರನ್ ಗಳಿಸಿದ್ದರು. 1999 ಹಾಗೂ 2003ರಲ್ಲಿ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯ ತಂಡದ ಪರ ಬೆವನ್ ಆಡಿದ್ದರು.
ತನ್ನ ನಿವೃತ್ತಿಯ ಸಮಯದಲ್ಲಿ ಪುರುಷರ ಏಕದಿನ ಕ್ರಿಕೆಟ್ನಲ್ಲಿ ಬೆವೆನ್ ಮೂರನೇ ಗರಿಷ್ಠ ಬ್ಯಾಟಿಂಗ್ ಸರಾಸರಿ ಹೊಂದಿದ್ದರು. 36 ವಿಕೆಟ್ಗಳನ್ನು ಕಬಳಿಸಿದ್ದ ಬೆವನ್ 45.97 ಸರಾಸರಿ ಹೊಂದಿದ್ದರು.
ಬೆವೆನ್ 237 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಆಸ್ಟ್ರೇಲಿಯ, ನ್ಯೂ ಸೌತ್ ವೇಲ್ಸ್, ತಾಸ್ಮಾನಿಯಾ, ಸೌತ್ ಆಸ್ಟ್ರೇಲಿಯ, ಯಾರ್ಕ್ಶೈರ್, ಸಸ್ಸೆಕ್ಸ್, ಲೈಸೆಸ್ಟರ್ಶೈರ್ ಹಾಗೂ ಕೆಂಟ್ ತಂಡಗಳನ್ನು ಪ್ರತಿನಿಧಿಸಿದ್ದರು. ಬೆವೆನ್ 57.32ರ ಸರಾಸರಿಯಲ್ಲಿ 68 ಶತಕ ಹಾಗೂ 81 ಅರ್ಧಶತಕಗಳ ಸಹಿತ 19,147 ರನ್ ಗಳಿಸಿದ್ದಾರೆ.