ಮೈಕ್ ಹೆಸನ್ ಪಾಕ್ ಕ್ರಿಕೆಟ್ ತಂಡದ ಸೀಮಿತ್ ಓವರ್ ಗಳ ಪ್ರಧಾನ ಕೋಚ್

ಮೈಕ್ ಹೆಸನ್ | PC : NDTV
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ವಿಭಾಗದ ಪ್ರಧಾನ ಕೋಚ್ ಆಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಇದರ ಮಾಜಿ ಕೋಚ್, ನ್ಯೂಝಿಲ್ಯಾಂಡ್ ನ ಮೈಕ್ ಹೆಸನ್ ರನ್ನು ಮಂಗಳವಾರ ನೇಮಿಸಲಾಗಿದೆ.
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಮುಕ್ತಾಯಗೊಳ್ಳುವ ಒಂದು ದಿನದ ಬಳಿಕ, ಅಂದರೆ ಮೇ 26ರಂದು ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಟಿಸಿದೆ.
ಪಾಕಿಸ್ತಾನಿ ಕ್ರಿಕೆಟ್ ತಂಡದ ನಿರಾಶಾದಾಯಕ ನ್ಯೂಝಿಲ್ಯಾಂಡ್ ಪ್ರವಾಸ ಮತ್ತು ಅದಕ್ಕೂ ಮೊದಲು ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದು ನೀಡಿದ ಕಳಪೆ ಪ್ರದರ್ಶನದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಧಾನ ಕೋಚ್ ಹುದ್ದೆಗಾಗಿ ಜಾಹೀರಾತು ನೀಡಿತ್ತು. ನ್ಯೂಝಿಲ್ಯಾಂಡ್ ನ ಪ್ರಧಾನ ಕೋಚ್ ಆಗಿ ಹೆಸರು ಮಾಡಿದ್ದ ಹೆಸ್ಸನ್ ಪಾಕಿಸ್ತಾನದ ನೂತನ ಕೋಚ್ ಆಗುತ್ತಾರೆ ಎಂಬ ಸುದ್ದಿ ಹರಡಿತ್ತು.
ಬಿಳಿ ಚೆಂಡಿನ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗಾಗಿ ನಾಲ್ವರು ವಿದೇಶೀಯರು ಸೇರಿದಂತೆ ಒಟ್ಟು ಏಳು ಅಭ್ಯರ್ಥಿಗಳು ಅರ್ಜಿ ಹಾಕಿದ್ದರು.
ಹೆಸ್ಸನ್ ಪ್ರಸಕ್ತ ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಹಾಲಿ ಚಾಂಪಿಯನ್ ಇಸ್ಲಾಮಾಬಾದ್ ಯುನೈಟೆಡ್ ತಂಡದ ಪ್ರಧಾನ ಕೋಚ್ ಆಗಿದ್ದಾರೆ.





