ಟೆನಿಸ್ ಗೆ ವಿದಾಯ ಹೇಳಿದ ಕೆನಡಾದ ಮಿಲೊಸ್ ರಾವೊನಿಕ್

ಮಿಲೊಸ್ ರಾವೊನಿಕ್ | Photo Credit : AP \ PTI
ಸಿಡ್ನಿ, ಜ.12: ಕೆನಡಾದ ಮಾಜಿ ವಿಶ್ವದ ನಂ.3 ಆಟಗಾರ ಮಿಲೊಸ್ ರಾವೊನಿಕ್ ರವಿವಾರ 15ಕ್ಕೂ ಅಧಿಕ ವರ್ಷಗಳ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು.
ಪವರ್ಫುಲ್ ಸರ್ವ್ಗಾಗಿ ಪ್ರಸಿದ್ಧರಾಗಿದ್ದ ಹಾಗೂ ‘ಮಿಸೈಲ್’ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದ ರಾವೊನಿಕ್, ತಮ್ಮ ವೃತ್ತಿಜೀವನದಲ್ಲಿ 8 ಎಟಿಪಿ ಟೂರ್ ಪ್ರಶಸ್ತಿಗಳನ್ನು ಹಾಗೂ 20 ಮಿಲಿಯನ್ ಅಮೆರಿಕನ್ ಡಾಲರ್ಗಿಂತ ಹೆಚ್ಚಿನ ಬಹುಮಾನ ಮೊತ್ತವನ್ನು ಗಳಿಸಿದ್ದಾರೆ.
2016ರಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಹಾಗೂ ವಿಂಬಲ್ಡನ್ ಚಾಂಪಿಯನ್ಶಿಪ್ ನಲ್ಲಿ ಫೈನಲ್ಗೆ ತಲುಪಿದ್ದ ರಾವೊನಿಕ್, ಅದೇ ವರ್ಷ ತಮ್ಮ ವೃತ್ತಿಜೀವನದ ಉಚ್ಚ್ರಾಯ ಸ್ಥಿತಿಗೆ ತಲುಪಿದ್ದರು. ಈ ಎರಡೂ ಪಂದ್ಯಗಳಲ್ಲಿ ಅವರು ಬ್ರಿಟನ್ನ ಆ್ಯಂಡಿ ಮರ್ರೆಗೆ ಸೋಲನುಭವಿಸಿದ್ದರು.
‘‘ನಿಮಗೆ ಗೊತ್ತಿರುವಂತೆ, ಈ ಕ್ಷಣವು ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲೂ ಬರುತ್ತದೆ. ಆದರೆ ಕೆಲವರು ಅದಕ್ಕೆ ಸಿದ್ಧರಾಗಿರುವುದಿಲ್ಲ. ಟೆನಿಸ್ ನನ್ನ ಜೀವಾಳ. ಜೀವನದಲ್ಲಿ ನಾನು ಅತ್ಯಂತ ಪ್ರೀತಿಸುವ ಕ್ರೀಡೆ ಇದು. ನನ್ನ ಕನಸುಗಳನ್ನು ನನಸು ಮಾಡಿಕೊಂಡಿರುವೆ ಎಂಬುದಕ್ಕೆ ನಾನು ಅದೃಷ್ಟಶಾಲಿ. ಪ್ರತಿದಿನವೂ ಇನ್ನಷ್ಟು ಉತ್ತಮವಾಗಿ ಆಡಲು ಪ್ರಯತ್ನಿಸಿದ್ದೇನೆ,’’ ಎಂದು ರಾವೊನಿಕ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ರಾವೊನಿಕ್ ಅವರು ಹಿಂದಿನ ಯುಗೋಸ್ಲಾವಿಯಾದಲ್ಲಿ ಜನಿಸಿದ್ದರು. 1990ರ ಆರಂಭದಲ್ಲಿ ತಮ್ಮ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಾಗ, ರಾವೊನಿಕ್ ಹಾಗೂ ಅವರ ಕುಟುಂಬ ಕೆನಡಾಕ್ಕೆ ವಲಸೆ ಹೋಗಿದ್ದು, ಆಗ ಅವರಿಗೆ ಮೂರು ವರ್ಷ ವಯಸ್ಸಾಗಿತ್ತು.
2008ರಲ್ಲಿ ವೃತ್ತಿಪರ ಟೆನಿಸ್ಗೆ ಪಾದಾರ್ಪಣೆ ಮಾಡಿದ ರಾವೊನಿಕ್, ಮೂರು ವರ್ಷಗಳ ಬಳಿಕ ಪೆಸಿಫಿಕ್ ಕೋಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಫೆರ್ನಾಂಡೊ ವೆರ್ಡಾಸ್ಕೊರನ್ನು ಮಣಿಸಿ ತಮ್ಮ ಮೊದಲ ಎಟಿಪಿ ಪ್ರಶಸ್ತಿಯನ್ನು ಗೆದ್ದಿದ್ದರು.
2013ರಿಂದ 2020ರ ನಡುವೆ ರಾವೊನಿಕ್ ನಾಲ್ಕು ಮಾಸ್ಟರ್ಸ್–1000 ಫೈನಲ್ ಪಂದ್ಯಗಳನ್ನು ಆಡಿದ್ದು, ಎಲ್ಲದಲ್ಲೂ ಸೋಲನುಭವಿಸಿದ್ದರು. ಕೆನಡಾ ಓಪನ್ನಲ್ಲಿ ರಫೆಲ್ ನಡಾಲ್ ವಿರುದ್ಧ ಹಾಗೂ ಉಳಿದ ಮೂರು ಫೈನಲ್ಗಳಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಅವರು ಪರಾಭವಗೊಂಡಿದ್ದರು.
2020ರ ಸಿನ್ಸಿನಾಟಿ ಮಾಸ್ಟರ್ಸ್ನಲ್ಲಿ ಜೊಕೊವಿಕ್ ವಿರುದ್ಧ ಸೋತ ಬಳಿಕ ಅವರು ಮತ್ತೆ ಎಟಿಪಿ ಫೈನಲ್ನಲ್ಲಿ ಕಾಣಿಸಿಕೊಂಡಿರಲಿಲ್ಲ. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜರ್ಮನಿಯ ಡೊಮಿನಿಕ್ ಕೊಫೆರ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದು, ಅದೇ ಅವರ ಕೊನೆಯ ಪಂದ್ಯವಾಗಿತ್ತು.







