ನಾಲ್ಕನೇ ಟಿ-20: ಇಂಗ್ಲೆಂಡ್ ಗೆ ರೋಚಕ ಜಯ, ಸರಣಿ ಕೈವಶ
ಮಿಚೆಲ್ ಮಾರ್ಷ್ ಶತಕ ವ್ಯರ್ಥ

Photo Credit : x@englandcricket
ಸಿಡ್ನಿ, ನ.29: ನಾಯಕ ಮಿಚೆಲ್ ಮಾರ್ಷ್ ಶತಕ (119 ರನ್, 57 ಎಸೆತ, 9 ಬೌಂಡರಿ, 9 ಸಿಕ್ಸರ್) ಸಿಡಿಸಿದ ಹೊರತಾಗಿಯೂ ಆತಿಥೇಯ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡದ ವಿರುದ್ಧದ ನಾಲ್ಕನೇ ಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಏಳು ರನ್ಗಳಿಂದ ಸೋಲುಂಡಿದೆ.
ಈ ಫಲಿತಾಂಶದ ಮೂಲಕ ಇಂಗ್ಲೆಂಡ್ ತಂಡವು ಐದು ಪಂದ್ಯಗಳ ಟಿ-20 ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಡಿ.2ರಂದು ಐದನೇ ಹಾಗೂ ಕೊನೆಯ ಪಂದ್ಯವು ಕ್ಯಾನ್ಬೆರಾದಲ್ಲಿ ನಡೆಯಲಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ರವಿವಾರ ಟಾಸ್ ಜಯಿಸಿದ ಇಂಗ್ಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ನೀರಸ ಆರಂಭದಿಂದ ಚೇತರಿಸಿಕೊಂಡ ಆಂಗ್ಲರು ಸ್ಯಾಮ್ ಕರ್ರನ್ ಅರ್ಧಶತಕದ (ಔಟಾಗದೆ 50, 28 ಎಸೆತ, 2 ಬೌಂಡರಿ, 4 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 181 ರನ್ ಗಳಿಸಿದರು.
ಗೆಲ್ಲಲು 182 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ ತಂಡವು ನಾಯಕ ಮಾರ್ಷ್ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ಗಳ ನಷ್ಟಕ್ಕೆ 174 ರನ್ ಗಳಿಸಿ ಏಳು ರನ್ಗಳಿಂದ ಸೋತಿದೆ. ಮಾರ್ಷ್ ಗೆ ಮತ್ತೊಂದು ತುದಿಯಿಂದ ಸ್ಥಿರ ಬೆಂಬಲ ಸಿಗಲಿಲ್ಲ. ಯಾವ ಬ್ಯಾಟರ್ ಕೂಡ 20ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ.
ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಜಾಕ್ ಫ್ರೆಸರ್-ಮೆಕ್ಗುರ್ಕ್ (0) ಎರಡನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಆಗ ಎರಡನೇ ವಿಕೆಟ್ ಗೆ 52 ರನ್ ಸೇರಿಸಿದ ಮಾರ್ಷ್ ಹಾಗೂ ಸ್ಯಾಮ್ ಹಾರ್ಪರ್ (18 ರನ್) ತಂಡವನ್ನು ಆಧರಿಸಿದರು.
ಹಾರ್ಪರ್ ಔಟಾದ ನಂತರ ನಿಖಿಲ್ ಚೌಧರಿ (12 ರನ್), ಟಿಮ್ ಡೇವಿಡ್ (12 ರನ್), ಲಚ್ಲಾನ್ ಶಾ (6 ರನ್) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಕೊನೆಯ ಓವರ್ ನಲ್ಲಿ ಮಾರ್ಷ್ ಔಟಾದರು. ಆಗ ಆಸ್ಟ್ರೇಲಿಯ ಗೆಲುವಿಗೆ 9 ರನ್ ಅಗತ್ಯವಿತ್ತು. ಮಾರ್ಷ್ ವಿಕೆಟ್ ಪಡೆದ ಹೆನ್ರಿ ಕ್ರೊಕಾಂಬ್ ನಂತರದ ಎಸೆತದಲ್ಲೇ ಜೋಯೆಲ್ ಡೇವಿಸ್ (0) ಅವರನ್ನೂ ಔಟ್ ಮಾಡಿದರು. ಜ್ಯಾಕ್ ಎಡ್ವರ್ಡ್ಸ್ (ಔಟಾಗದೆ 4) ಹಾಗೂ ಆಡಮ್ ಝಂಪಾ (ಔಟಾಗದೆ 1) ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಇಂಗ್ಲೆಂಡ್ ಪರ ಹೆನ್ರಿ ಕ್ರೊಕಾಂಬ್ (3-28) ಯಶಸ್ವಿ ಪ್ರದರ್ಶನ ನೀಡಿದರು.
ಇದಕ್ಕೂ ಮೊದಲು ಇಂಗ್ಲೆಂಡ್ ತಂಡ ಕೂಡ 4.2 ಓವರ್ ಗಳಲ್ಲಿ 32 ರನ್ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಜೋರ್ಡನ್ ಕಾಕ್ಸ್ (23 ರನ್), ಜೇಮ್ಸ್ ಕೋಲ್ಸ್ (33 ರನ್, 29 ಎಸೆತ) ಹಾಗೂ ಲಿಯಾಮ್ ಡಾಸನ್ (23 ರನ್) ಎರಡಂಕೆಯ ಸ್ಕೋರ್ ಗಳಿಸಿದರು.
ಕರ್ರನ್ ಹಾಗೂ ಜಮೀ ಓವರ್ಟನ್ (ಔಟಾಗದೆ 20) ಎಂಟನೇ ವಿಕೆಟ್ ಗೆ 51 ರನ್ ಸೇರಿಸಿ ತಂಡವು ಗೌರವಾರ್ಹ ಮೊತ್ತ ಗಳಿಸಲು ನೆರವಾದರು. ಆಸ್ಟ್ರೇಲಿಯದ ಪರ ಸ್ಪೆನ್ಸರ್ ಜಾನ್ಸನ್ (2-39) ಹಾಗೂ ರೈಲಿ ಮೆರೆಡಿತ್ (2-44) ತಲಾ ಎರಡು ವಿಕೆಟ್ ಗಳನ್ನು ಪಡೆದರು.
►ಆ್ಯರೊನ್ ಫಿಂಚ್ ದಾಖಲೆ ಮುರಿದ ಮಾರ್ಷ್
ಇಂಗ್ಲೆಂಡ್ ವಿರುದ್ಧ 18ನೇ ಓವರ್ ನಲ್ಲಿ ಶತಕ ಗಳಿಸಿದ ಆಸ್ಟ್ರೇಲಿಯದ ನಾಯಕ ಮಿಚೆಲ್ ಮಾರ್ಷ್ ಕೇವಲ 57 ಎಸೆತಗಳಲ್ಲಿ 9 ಬೌಂಡರಿ, 9 ಸಿಕ್ಸರ್ ಗಳ ಸಹಿತ 119 ರನ್ ಗಳಿಸಿದರು. ಆಸ್ಟ್ರೇಲಿಯ ಪರ ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ ಮಾರ್ಷ್ ಅವರು ಮಾಜಿ ನಾಯಕ ಆ್ಯರೊನ್ ಫಿಂಚ್ ಅವರ 125 ಸಿಕ್ಸರ್ ಗಳ ದಾಖಲೆಯನ್ನು ಮುರಿದರು.
ಇಂಗ್ಲೆಂಡ್ ವಿರುದ್ಧ 9 ಸಿಕ್ಸರ್ ಗಳನ್ನು ಸಿಡಿಸಿರುವ ಮಾರ್ಷ್ ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 130 ಸಿಕ್ಸರ್ ಸಿಡಿಸಿದರು. ಗರಿಷ್ಠ ಸಿಕ್ಸರ್ ಸಿಡಿಸಿದ ಆಸ್ಟ್ರೇಲಿಯದ ಬ್ಯಾಟರ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು. ಗ್ಲೆನ್ ಮ್ಯಾಕ್ಸ್ವೆಲ್ (150 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದಾರೆ.






