ಏಕದಿನ ನಾಯಕತ್ವ ವಹಿಸಿಕೊಳ್ಳಲು ಗಿಲ್ಗೆ ಅಜಿತ್ ಅಗರ್ಕರ್ ಒತ್ತಡ ಹೇರಿದ್ದಾರೆ : ಮುಹಮ್ಮದ್ ಕೈಫ್

ಮುಹಮ್ಮದ್ ಕೈಫ್ , ಅಜಿತ್ ಅಗರ್ಕರ್ , ಗಿಲ್ | Photo Credit : PTI
ಹೊಸದಿಲ್ಲಿ, ಅ.6: ರೋಹಿತ್ ಶರ್ಮಾರನ್ನು ಏಕದಿನ ಕ್ರಿಕೆಟ್ ನಾಯಕತ್ವದಿಂದ ತೆಗೆದು ಹಾಕಿರುವ ನಿರ್ಧಾರವನ್ನು ಪ್ರಶ್ನಿಸಿರುವ ಭಾರತದ ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್, ಏಕದಿನ ನಾಯಕತ್ವ ವಹಿಸಿಕೊಳ್ಳುವಂತೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ಶುಭಮನ್ ಗಿಲ್ ಮೇಲೆ ಒತ್ತಡ ಹೇರಿದ್ದಾರೆ ಎಂದು ದೂಷಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ 13 ನಿಮಿಷಗಳ ಭಾವನಾತ್ಮ್ಮಕ ವೀಡಿಯೊದಲ್ಲಿ ಈ ಕುರಿತು ಮಾತನಾಡಿರುವ ಕೈಫ್, ‘‘ರೋಹಿತ್ ಶರ್ಮಾ ಏನು ತಪ್ಪು ಮಾಡಿದ್ದಾರೆ? ರೋಹಿತ್ ಅವರಿಂದ ನಮಗೆ ದೀರ್ಘ ನಾಯಕತ್ವ ಸಿಗದಿರುವುದು ತುಂಬಾ ದುರದೃಷ್ಟಕರ. ಅವರು ನಾಲ್ಕು ವರ್ಷ ಕೂಡ ನಾಯಕನಾಗಿರಲಿಲ್ಲ’’ ಎಂದರು.
‘‘ಒಬ್ಬ ಶ್ರೇಷ್ಠ ಬ್ಯಾಟರ್ ಹಾಗೂ ಅತ್ಯುತ್ತಮ ನಾಯಕನು ಇನ್ನೂ ಉತ್ತಮ ದಾಖಲೆ ನಿರ್ಮಿಸುವ ಸಾಧ್ಯತೆ ಇತ್ತು. ನೀವು ನಾಯಕತ್ವವನ್ನು ಕಸಿದುಕೊಂಡರೆ, ಒಬ್ಬ ಆಟಗಾರನು ತನ್ನ ಬಲಗೈಯನ್ನು ಕಳೆದುಕೊಂಡಂತೆ ಎನ್ನುವುದು ನನ್ನ ಅನಿಸಿಕೆ’’ ಎಂದು ಕೈಫ್ ಹೇಳಿದ್ದಾರೆ.
ಆಯ್ಕೆ ಸಮಿತಿಯು ನಾಯಕತ್ವ ಬದಲಾಯಿಸಲು 2027ರ ಏಕದಿನ ವಿಶ್ವಕಪ್ ತನಕ ಕಾಯಬೇಕಾಗಿತ್ತು ಎಂದಿರುವ ಕೈಫ್, ‘‘ 2027ರ ಏಕದಿನ ವಿಶ್ವಕಪ್ ನಂತರ ನಾಯಕತ್ವ ಬದಲಾವಣೆಯಾಗಬಹುದು ಎಂದು ನಾನು ಭಾವಿಸಿದ್ದೆ. ರೋಹಿತ್ ತನ್ನ ಫಿಟ್ನೆಸ್ ಬಗ್ಗೆಯೂ ಕಾರ್ಯೋನ್ಮುಖವಾಗಿದ್ದು, ಅವರಿಗೆ 2027ರ ವಿಶ್ವಕಪ್ನಲ್ಲಿ ಆಡುವ ವಾಸ್ತವಿಕ ಅವಕಾಶವಿತ್ತು’’ಎಂದು ಹೇಳಿದರು.
ಹೆಚ್ಚುವರಿ ಜವಾಬ್ದಾರಿಯು ಶುಭಮನ್ ಗಿಲ್ರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಬಹುದು ಎಂದು ಕೈಫ್ ಎಚ್ಚರಿಸಿದ್ದಾರೆ.
‘‘ಗಿಲ್ ಮೇಲೆ ಹೊರೆ ಬೀಳುತ್ತದೆ. ಅವರು ಇದನ್ನೆಲ್ಲಾ ಆತುರದಿಂದ ಮಾಡುತ್ತಿದ್ದಾರೆ. ಇದರಿಂದ ಕೆಟ್ಟ ಪರಿಣಾಮ ಬೀರಬಹುದು. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಜವಾಬ್ದಾರಿ ಲಭಿಸಿದರೆ, ಅದು ಪ್ರದರ್ಶನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ’’ ಎಂದರು.
‘‘ಗಿಲ್ ಮೇಲೆ ಹೆಚ್ಚಿನ ಹೊರೆ ಹಾಕಬೇಡಿ ಎನ್ನುವುದು ನನ್ನ ಮನವಿ. ಅವರು ಟೆಸ್ಟ್ನಲ್ಲಿ ನಾಯಕನಾಗಿದ್ದು, 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಏಶ್ಯ ಕಪ್ನಲ್ಲಿ ಉಪ ನಾಯಕನಾಗಿದ್ದಾರೆ. ಸೂರ್ಯಕುಮಾರ್ ದೂರ ಸರಿದಾಗ ಟಿ-20 ತಂಡದ ನಾಯಕನಾಗಬಹುದು. ಈಗ ಗಿಲ್ರನ್ನು ಏಕದಿನ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಎಲ್ಲವೂ ಆತುರದಿಂದ ನಡೆಯುತ್ತಿದೆ. ಒಬ್ಬ ಆಟಗಾರ ಎಂದಿಗೂ ನಾಯಕತ್ವ ಕೇಳುವುದಿಲ್ಲ. ಗಿಲ್ ಅದನ್ನು ಬಯಸಿರಲಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಎಲ್ಲರೂ ಅವರನ್ನು ಭವಿಷ್ಯದ ನಾಯಕ ಎಂದು ಪರಿಗಣಿಸುತ್ತಾರೆ. ಅಜಿತ್ ಅಗರ್ಕರ್ ಸೇರಿದಂತೆ ಆಯ್ಕೆದಾರರು ಅವರ ಮೇಲೆ ಒತ್ತಡ ಹೇರಿದ್ದಾರೆ’’ ಎಂದು ಕೈಫ್ ಆರೋಪಿಸಿದ್ದಾರೆ.







