ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದಿಂದ ವಂಚಿತ ಮುಹಮ್ಮದ್ ಶಮಿಗೆ ಬಂಗಾಳದ ದೇಶೀಯ ತಂಡದಲ್ಲಿ ಅವಕಾಶ

ಮುಹಮ್ಮದ್ ಶಮಿ | PC : PTI
ಹೊಸದಿಲ್ಲಿ: ಮುಂಬರುವ 2025-26ರ ದೇಶೀಯ ಋತುವಿಗಾಗಿ ಬಂಗಾಳ ಕ್ರಿಕೆಟ್ ತಂಡದ 50 ಸದಸ್ಯರ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ಪ್ರವಾಸದಿಂದ ವಂಚಿತರಾಗಿರುವ ಭಾರತದ ಹಿರಿಯ ವೇಗಿ ಮುಹಮ್ಮದ್ ಶಮಿಗೆ ಸ್ಥಾನ ನೀಡಲಾಗಿದೆ.
ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಶಮಿ ಅವರಲ್ಲದೆ, ಅಭಿಮನ್ಯು ಈಶ್ವರನ್, ಆಕಾಶ್ ದೀಪ್, ಮುಕೇಶ್ ಕುಮಾರ್, ಶಹಬಾಝ್ ಅಹ್ಮದ್ ಹಾಗೂ ಅಭಿಷೇಕ್ ಪೊರೆಲ್ರಂತಹ ಪ್ರಮುಖ ಆಟಗಾರರ ಹೆಸರೂ ಇದೆ.
ಆಕಾಶ್ ದೀಪ್ ಹಾಗೂ ಅಭಿಮನ್ಯು ಈಶ್ವರನ್ ಸದ್ಯ ಇಂಗ್ಲೆಂಡ್ನಲ್ಲಿ ಭಾರತೀಯ ತಂಡದೊಂದಿಗಿದ್ದಾರೆ.
34ರ ಹರೆಯದ ಶಮಿ ಅವರು ಫಿಟ್ನೆಸ್ ಕಾರಣಕ್ಕೆ ಈಗ ನಡೆಯುತ್ತಿರುವ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದಲ್ಲಿ ಕಡೆಗಣಿಸಲ್ಪಟ್ಟಿದ್ದರು. 2025ರ ಐಪಿಎಲ್ ಟೂರ್ನಿಯ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಶಮಿ ಕಾಣಿಸಿಕೊಂಡಿಲ್ಲ. ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ಶಮಿ ಅವರು ತನ್ನ ಮೊದಲ ಲಯ ಕಂಡುಕೊಳ್ಳುವಲ್ಲಿ ಪರದಾಟ ನಡೆಸಿದ್ದರು.
2025ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಅಭಿಯಾನದ ವೇಳೆ ಭಾರತ ತಂಡದ ಪರ ಶಮಿ ಕೊನೆಯ ಬಾರಿ ಆಡಿದ್ದರು. ವರುಣ್ ಚಕ್ರವರ್ತಿ ಜೊತೆ ಜಂಟಿ ಗರಿಷ್ಠ ವಿಕೆಟ್ ಗಳಿಕೆದಾರನಾಗಿದ್ದರು. ಶಮಿ ಹಾಗೂ ವರುಣ್ ತಲಾ 9 ವಿಕೆಟ್ಗಳನ್ನು ಪಡೆದಿದ್ದರು.
2023ರ ಏಕದಿನ ವಿಶ್ವಕಪ್ ಟೂರ್ನಿಯ ಸಂದರ್ಭ ಶಮಿಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 24 ವಿಕೆಟ್ಗಳನ್ನು ಉರುಳಿಸಿದ್ದ ಶಮಿ ಗರಿಷ್ಠ ವಿಕೆಟ್ ಸರದಾರನಾಗಿದ್ದರು. ವಿಶ್ವಕಪ್ನ ನಂತರ ಅವರು ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ದೇಶೀಯ ಕ್ರಿಕೆಟ್ನಲ್ಲಿ ಭರ್ಜರಿ ಪುನರಾಗಮನಗೈದ ಶಮಿ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ಮಧ್ಯ ಪ್ರದೇಶದ ವಿರುದ್ಧ ಬಂಗಾಳ ತಂಡವು 11 ರನ್ನಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶಮಿ ಅವರು ಪಂದ್ಯದಲ್ಲಿ 7 ವಿಕೆಟ್ಗಳನ್ನು ಕಬಳಿಸಿದ್ದು, ಬ್ಯಾಟಿಂಗ್ನಲ್ಲಿ 37 ರನ್ ಕೊಡುಗೆ ನೀಡಿದ್ದರು.
2024ರಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಶಮಿ ಅವರು ಇಂಗ್ಲೆಂಡ್ ವಿರುದ್ಧ 4 ಸೀಮಿತ ಓವರ್ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಆದರೆ ಅವರನ್ನು ಇಂಗ್ಲೆಂಡ್ನಲ್ಲಿ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಗಾಗಿ ನಡೆದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತೀಯ ತಂಡದಲ್ಲಿ ಕಡೆಗಣಿಸಲಾಗಿದೆ.
ಟೆಸ್ಟ್ ಪಂದ್ಯದ ಬೌಲಿಂಗ್ಗೆ ಬೇಕಾಗಿರುವ ದೈಹಿಕ ಕ್ಷಮತೆ ಶಮಿ ಅವರಲ್ಲಿ ಇಲ್ಲ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದರು.
ಶಮಿ ಅವರು 2023ರ ಜುಲೈನಲ್ಲಿ ಆಸ್ಟ್ರೇಲಿಯದ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯ ಆಡಿದ್ದರು. ಶಮಿ ಅವರು ಈ ತನಕ ಭಾರತದ ಪರ 64 ಟೆಸ್ಟ್, 108 ಏಕದಿನ ಹಾಗೂ 25 ಟಿ-20 ಪಂದ್ಯಗಳನ್ನು ಆಡಿದ್ದಾರೆ.







