"ನಾನು ರಣಜಿಯಲ್ಲಿ ಆಡಬಹುದಾದರೆ, ಏಕದಿನ ಪಂದ್ಯದಲ್ಲಿ ಯಾಕೆ ಆಡಲಾಗದು?": ಟೀಂ ಮ್ಯಾನೇಜ್ಮೆಂಟ್ ವಿರುದ್ಧ ಶಮಿ ಆಕ್ರೋಶ

ಮುಹಮ್ಮದ್ ಶಮಿ |Photo Credit : PTI
ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯಾ ಎದುರಿನ ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿಗೆ ತನ್ನನ್ನು ಕೈಬಿಟ್ಟಿರುವ ಭಾರತದ ಟೀಂ ಮ್ಯಾನೇಜ್ಮೆಂಟ್ ನಿರ್ಣಯವನ್ನು ಭಾರತ ತಂಡದ ಹಿರಿಯ ಅಟಗಾರ ಮುಹಮ್ಮದ್ ಶಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ತಮ್ಮ ದೈಹಿಕ ಸಾಮರ್ಥ್ಯವನ್ನು ಮುಂದು ಮಾಡಿ, ತಮ್ಮನ್ನು ಭಾರತೀಯ ಏಕದಿನ ಹಾಗೂ ಟಿ-20 ತಂಡಗಳಿಂದ ಕೈಬಿಟ್ಟಿರುವ ಟೀಂ ಮ್ಯಾನೇಜ್ಮೆಂಟ್ ನಿರ್ಧಾರವನ್ನು ಪ್ರಶ್ನಿಸಿರುವ ವೇಗಿ ಮುಹಮ್ಮದ್ ಶಮಿ, "ಒಂದು ವೇಳೆ ನಾನು ನಾಲ್ಕು ದಿನಗಳ ರಣಜಿ ಪಂದ್ಯಗಳಲ್ಲಿ ಆಡಲು ದೈಹಿಕವಾಗಿ ಸಮರ್ಥನಿರುವುದಾದರೆ, 50 ಓವರ್ಗಳ ಪಂದ್ಯಗಳಲ್ಲಿ ಆಡಲು ಯಾಕೆ ಸಮರ್ಥನಲ್ಲ?" ಎಂದು ಪ್ರಶ್ನಿಸಿದ್ದಾರೆ.
ಆಸ್ಟ್ರೇಲಿಯಾ ತಂಡದೆದುರಿನ ಏಕದಿನ ಮತ್ತು ಟಿ-20 ಸರಣಿಗೆ ಭಾರತ ತಂಡಕ್ಕೆ ಮುಹಮ್ಮದ್ ಶಮಿಯನ್ನು ಅವರ ದೈಹಿಕ ಸಾಮರ್ಥ್ಯದ ನೆಪವೊಡ್ಡಿ ಆಯ್ಕೆ ಮಾಡಿಲ್ಲ. ಆದರೆ, ಅಕ್ಟೋಬರ್ 15ರಿಂದ ಪ್ರಾರಂಭಗೊಳ್ಳಲಿರುವ 2025-26ನೇ ಸಾಲಿನ ರಣಜಿ ಋತುವಿಗೆ ಪಶ್ಚಿಮ ಬಂಗಾಳ ತಂಡದಲ್ಲಿ ಅವರನ್ನು ಸೇರ್ಪಡೆ ಮಾಡಲಾಗಿದೆ.
ಈ ತಂಡದ ನಾಯಕತ್ವವನ್ನು ಅಭಿಮನ್ಯು ಈಶ್ವರನ್ ವಹಿಸಲಿದ್ದಾರೆ ಎಂದು ಬುಧವಾರ ಬಂಗಾಳ ಕ್ರಿಕೆಟ್ ಒಕ್ಕೂಟ ಪ್ರಕಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮುಹಮ್ಮದ್ ಶಮಿ, "ನನ್ನ ದೈಹಿಕ ಸಾಮರ್ಥ್ಯ ಸಾಬೀತುಪಡಿಸುವಂತೆ ಭಾರತೀಯ ತಂಡ ನನ್ನನ್ನು ಸಂಪರ್ಕಿಸಿಲ್ಲ. ನನ್ನ ದೈಹಿಕ ಸಾಮರ್ಥ್ಯ ಸಾಬೀತುಪಡಿಸುವಂತೆ ಅವರು ನನ್ನನ್ನು ಕೇಳಬೇಕೇ ಹೊರತು, ನಾನು ಅದರ ಮಾಹಿತಿ ನೀಡಲಾಗುವುದಿಲ್ಲ. ನಾನು ನಾಲ್ಕು ದಿನಗಳ ಪಂದ್ಯವನ್ನಾಡಬಹುದಾದರೆ, ಏಕದಿನ ಪಂದ್ಯವನ್ನಾಡಲು ಏಕೆ ಸಾಧ್ಯವಿಲ್ಲ? ನಾನು ದೈಹಿಕವಾಗಿ ಸಮರ್ಥನಲ್ಲದಿದ್ದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುತ್ತಿದ್ದೆನೆ ಹೊರತು ರಣಜಿ ಟ್ರೋಫಿಯಲ್ಲಿ ಆಡುತ್ತಿರಲಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.







