2 ಪಂದ್ಯಗಳಲ್ಲಿ 15 ವಿಕೆಟ್ಗಳು : ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶ ರವಾನಿಸಿದ ಮುಹಮ್ಮದ್ ಶಮಿ

ಮುಹಮ್ಮದ್ ಶಮಿ | PC : PTI
ಕೋಲ್ಕತಾ, ಅ.28: ಈಗ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಬಂಗಾಳದ ಪರ ಆಡಿರುವ ಕೇವಲ 2 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಉರುಳಿಸಿರುವ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗಿಂತ ಮೊದಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಈಡನ್ಗಾರ್ಡನ್ಸ್ ನಲ್ಲಿ ಮಂಗಳವಾರ ಕೊನೆಗೊಂಡ 2ನೇ ಸುತ್ತಿನ ರಣಜಿ ಪಂದ್ಯದಲ್ಲಿ ಶಮಿ ಅವರು ಒಟ್ಟು 8 ವಿಕೆಟ್ಗಳನ್ನು ಉರುಳಿಸಿ ಬಂಗಾಳ ತಂಡವು ಗುಜರಾತ್ ತಂಡವನ್ನು 141 ರನ್ಗಳಿಂದ ಮಣಿಸಲು ನೆರವಾದರು. 35ರ ಹರೆಯದ ಶಮಿ 2ನೇ ಇನಿಂಗ್ಸ್ನಲ್ಲಿ 10 ಓವರ್ಗಳಲ್ಲಿ 38 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದರು. ಕೊನೆಯ ದಿನದಾಟದಲ್ಲಿ ಗೆಲುವಿಗೆ 327 ರನ್ ಬೆನ್ನಟ್ಟುತ್ತಿದ್ದ ಗುಜರಾತ್ ತಂಡವನ್ನು ಕೇವಲ 185 ರನ್ಗೆ ಕಟ್ಟಿಹಾಕಿದರು. ಶಮಿ ಮೊದಲ ಇನಿಂಗ್ಸ್ನಲ್ಲಿ 44 ರನ್ಗಳನ್ನು 3 ವಿಕೆಟ್ಗಳನ್ನು ಉರುಳಿಸಿದ್ದರು.
ಉತ್ತರಾಖಂಡ ವಿರುದ್ಧದ ಮೊದಲ ಸುತ್ತಿನ ರಣಜಿ ಪಂದ್ಯದಲ್ಲಿ ಶಮಿ ಅವರು 7 ವಿಕೆಟ್ಗಳನ್ನು ಕಬಳಿಸಿ ಬಂಗಾಳ ತಂಡ 8 ವಿಕೆಟ್ಗಳಿಂದ ಗೆಲ್ಲುವಲ್ಲಿ ನೆರವಾಗಿದ್ದರು. 2 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದಿರುವ ಶಮಿ ಈ ವರ್ಷ ರಣಜಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಜಮ್ಮು-ಕಾಶ್ಮೀರದ ಆಕಿಬ್ ದಾರ್(17)ಹಾಗೂ ಸರ್ವಿಸಸ್ ತಂಡದ ಅರ್ಜುನ್ ಶರ್ಮಾ(16)ಮೊದಲೆರಡು ಸ್ಥಾನದಲ್ಲಿದ್ದಾರೆ.
ಶಮಿ ಈ ವರ್ಷಾರಂಭದಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಭಾರತದ ಪರ ಕೊನೆಯ ಬಾರಿ ಆಡಿದ್ದರು. ಆ ನಂತರ ಅವರು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೊನೆಯ ಸಲ ಟೆಸ್ಟ್ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು.
ಶಮಿ ಅವರ ಇತ್ತೀಚೆಗಿನ ಫಾರ್ಮ್ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಗೆ ನೇರ ಪ್ರತಿಕ್ರಿಯೆಯಾಗಿ ಕಂಡುಬರುತ್ತಿದೆ. ಶಮಿ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕಾದರೆ ಅವರು ಇನ್ನಷ್ಟು ಪಂದ್ಯ ಆಡಬೇಕೆಂದು ಅಗರ್ಕರ್ ಹೇಳಿಕೆ ನೀಡಿದ್ದರು. ‘‘ಅವರು ಏನು ಬೇಕಾದರೂ ಹೇಳಲಿ, ನಾನು ಹೇಗೆ ಬೌಲಿಂಗ್ ಮಾಡಿದ್ದೇನೆಂದು ನೀವು ನೋಡಿದ್ದೀರಿ, ಇದೆಲ್ಲವೂ ನಿಮ್ಮ ಕಣ್ಣ ಮುಂದೆಯೇ ಇದೆ’’ಎಂದು ಶಮಿ ತಿರುಗೇಟು ನೀಡಿದ್ದರು.







