ಮುಹಮ್ಮದ್ ಶಮಿ ಮೇಲೆ ನಂಬಿಕೆ ಇಡಿ: ಗಂಗುಲಿ ʼಗಂಭೀರʼ ಸಂದೇಶ

ಸೌರವ್ ಗಂಗುಲಿ , ಮುಹಮ್ಮದ್ ಶಮಿ | Photo Credit : PTI
ಹೊಸದಿಲ್ಲಿ, ನ.17: ಭಾರತ ತಂಡವು ಅನುಭವಿ ವೇಗಿ ಮುಹಮ್ಮದ್ ಶಮಿ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಹೇಳಿದ್ದಾರೆ. ಈ ಮೂಲಕ ಶಮಿ ಅವರು ಟೆಸ್ಟ್ ತಂಡಕ್ಕೆ ಮರಳಬೇಕೆಂಬ ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿದ್ದಾರೆ.
ಈಡನ್ ಗಾರ್ಡನ್ಸ್ನಲ್ಲಿ ನಾಟಕೀಯ ಬೆಳವಣಿಗೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು 30 ರನ್ನಿಂದ ಸೋತ ನಂತರ ಗಂಗುಲಿ ಈ ಬೇಡಿಕೆ ಇಟ್ಟಿದ್ದಾರೆ. ಈ ಪಂದ್ಯದಲ್ಲಿ ಭಾರತದ ಕಳಪೆ ಬೌಲಿಂಗ್ ಬಹಿರಂಗವಾಗಿತ್ತು.
ತ್ರಿವಳಿ ವೇಗಿಗಳಾದ ಜಸ್ಪ್ರಿತ್ ಬುಮ್ರಾ, ಮುಹಮ್ಮದ್ ಸಿರಾಜ್ ಹಾಗೂ ಮುಹಮ್ಮದ್ ಶಮಿ ಅವರನ್ನು ನಂಬುವುದರಲ್ಲಿ ಪರಿಹಾರವಿದೆ ಎಂದು ಗಂಗುಲಿ ಸಲಹೆ ನೀಡಿದ್ದಾರೆ.
ಶಮಿ 2023ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಭಾರತದ ಪರ ಕೊನೆಯ ಟೆಸ್ಟ್ ಆಡಿದ್ದರು. ಚಾಂಪಿಯನ್ಸ್ ಟ್ರೋಫಿ ಹಾಗೂ ರಣಜಿ ಟ್ರೋಫಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಟೆಸ್ಟ್ ಕ್ರಿಕೆಟ್ ತಂಡದಿಂದ ಹೊರಗಿಡಲಾಗಿದೆ. ಈ ವರ್ಷದ ರಣಜಿಯಲ್ಲಿ 4 ಪಂದ್ಯಗಳಲ್ಲಿ 17 ವಿಕೆಟ್ ಗಳನ್ನು ಉರುಳಿಸಿರುವ ಶಮಿ ಅವರು ದೀರ್ಘಕಾಲದಿಂದ ಕಾಡುತ್ತಿರುವ ಗಾಯದಿಂದ ಸಂಪೂರ್ಣ ಫಿಟ್ ಆಗಿರುವಂತೆ ಕಂಡುಬಂದಿದ್ದಾರೆ.
‘‘ಬುಮ್ರಾ, ಸಿರಾಜ್ ಹಾಗೂ ಶಮಿ ಮೇಲೆ ನಂಬಿಕೆ ಇಡಬೇಕಾಗಿದೆ. ಈ ಟೆಸ್ಟ್ ತಂಡದಲ್ಲಿರುವ ಅರ್ಹತೆ ಶಮಿಗಿದೆ. ಶಮಿ ಹಾಗೂ ಸ್ಪಿನ್ನರ್ಗಳು ಗೌತಮ್ ಗಂಭೀರ್ ಗೆ ಪಂದ್ಯ ಗೆದ್ದುಕೊಡಬಲ್ಲರು’’ಎಂದು ‘ಸ್ಪೋರ್ಟ್ಸ್ ತಕ್’ಗೆ ಗಂಗುಲಿ ತಿಳಿಸಿದ್ದಾರೆ.
ಭಾರತದ ಪಿಚ್ ತಯಾರಿಯ ಬಗ್ಗೆ ಕೋಚ್ ಗಂಭೀರ್ ಗೆ ತೀಕ್ಷ್ಣ ಸಂದೇಶವನ್ನು ರವಾನಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಗಂಗುಲಿ, ಉತ್ತಮ ಬ್ಯಾಟಿಂಗ್ ಅಡಿಪಾಯವಿಲ್ಲದೆ ಭಾರತಕ್ಕೆ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು.
‘‘ಉತ್ತಮ ಪಿಚ್ನಲ್ಲಿ ಆಡುವಾಗ ಬ್ಯಾಟರ್ಗಳು 350-400 ರನ್ ಗಳಿಸಲು ಸಾಧ್ಯವಾಗದಿದ್ದರೆ, ಟೆಸ್ಟ್ ಗೆಲ್ಲಲು ಸಾಧ್ಯವಿಲ್ಲ. ಉತ್ತಮ ಪಿಚ್ನಲ್ಲಿ ಆಡಲೇಬೇಕು. ತಮ್ಮ ಆಟಗಾರರ ಮೇಲೆ ನಂಬಿಕೆ ಇಡಬೇಕು. ಟೆಸ್ಟ್ ಪಂದ್ಯವನ್ನು ಐದು ದಿನಗಳಲ್ಲಿ ಗೆಲ್ಲಬೇಕೆ ಹೊರತು ಮೂರು ದಿನಗಳಲ್ಲಿ ಅಲ್ಲ’’ ಎಂದು ಗಂಗುಲಿ ಹೇಳಿದರು.
ಗಂಗುಲಿ ಅವರು ಶಮಿ ಬೆಂಬಲಕ್ಕೆ ನಿಂತಿರುವುದು ಇದೇ ಮೊದಲಲ್ಲ. ಸರಣಿಗಿಂತ ಮೊದಲು 35ರ ಹರೆಯದ ಶಮಿ ಅವರನ್ನು ಸೇರ್ಪಡೆಗೊಳಿಸುವಂತೆ ಆಯ್ಕೆಗಾರರಿಗೆ ಗಂಗುಲಿ ಸಲಹೆ ನೀಡಿದ್ದರು.
ಶಮಿ ಫಾರ್ಮ್ ಹಾಗೂ ಫಿಟ್ನೆಸ್ ಬಗ್ಗೆ ಮತ್ತೊಮ್ಮೆ ಮಾತನಾಡಿದ ಗಂಗುಲಿ, ‘‘ಶಮಿ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಟೆಸ್ಟ್, ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಏಕೆ ಆಡುತ್ತಿಲ್ಲ ಎಂಬ ಕಾರಣ ನನಗೆ ಕಾಣುತ್ತಿಲ್ಲ. ಅವರಲ್ಲಿ ಅಗಾಧ ಕೌಶಲ್ಯವಿದೆ’’ ಎಂದರು.
ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಶಮಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಅವರ ಬದಲಿಗೆ ಆಯ್ಕೆಗಾರರು ಪ್ರಸಿದ್ಧ ಕೃಷ್ಣ ಹಾಗೂ ಆಕಾಶ ದೀಪ್ ಗೆ ಆದ್ಯತೆ ನೀಡಿದ್ದಾರೆ.







