ನಿವೃತ್ತಿ ವದಂತಿ ತಳ್ಳಿಹಾಕಿದ ಮುಹಮ್ಮದ್ ಶಮಿ

PC | icc
ಹೊಸದಿಲ್ಲಿ: ತಾವು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗುವ ಬಗೆಗಿನ ವದಂತಿಗಳನ್ನು ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ತಳ್ಳಿಹಾಕಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಳಿಕ 34 ವರ್ಷ ವಯಸ್ಸಿನ ವೇಗದ ಬೌಲರ್ ಶಮಿ ಕೂಡ ನಿವೃತ್ತರಾಗಲು ಸಜ್ಜಾಗಿದ್ದಾರೆ ಎಂಬ ಆನ್ಲೈನ್ ಪೋರ್ಟೆಲ್ ವರದಿಯನ್ನು ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ನಿರಾಕರಿಸಿದ್ದಾರೆ.
ಮುಹಮ್ಮದ್ ಶಮಿ ನಿವೃತ್ತಿ :
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಳಿಕ ಭಾರತೀಯ ವೇಗದ ಬೌಲರ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಲು ಸಜ್ಜು" ಎಂಬ ಶೀರ್ಷಿಕೆಯ ಲೇಖನದ ಅಂಶಗಳನ್ನು ಶಮಿ ಕಟುವಾಗಿ ಟೀಕಿಸಿದ್ದಾರೆ. ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲೇಖನದ ಸ್ಕ್ರೀನ್ಶಾಟ್ ಪೋಸ್ಟ್ ಮಾಡಿರುವ ಶಮಿ ಇನ್ಸ್ಟಾಗ್ರಾಂ ಸ್ಟೋರಿಸ್ ನಲ್ಲಿ, "ಮಹರಾಜ್ ಒಳ್ಳೆಯ ಕೆಲಸ ಮಾಡಿದ್ದೀರಿ; ನಿಮ್ಮ ಉದ್ಯೋಗದ ಕೊನೆಯ ದಿನಗಳನ್ನು ನೀವು ಎಣಿಸಬಹುದು. ಇಂಥ ಲೇಖನದ ಮೂಲಕ ಭವಿಷ್ಯವನ್ನು ನಾಶಪಡಿಸಿದ್ದೀರಿ. ಒಮ್ಮೆಯಾದರೂ ಧನಾತ್ಮಕ ಅಂಶವನ್ನು ಹೇಳಿ. ಇದು ದಿನದ ಅತ್ಯಂತ ಕೆಟ್ಟ ಲೇಖನ" ಎಂದು ಟೀಕಿಸಿದ್ದಾರೆ.
ಪ್ರಸ್ತುತ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಶಮಿ, ಜೂ.20ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಗಳ ಸರಣಿಗೆ ಲಭ್ಯ ಇರುವುದಾಗಿ ಪುನರುಚ್ಚರಿಸಿದ್ದಾರೆ. 64 ಟೆಸ್ಟ್ ಪಂದ್ಯಗಳಿಂದ 229 ವಿಕೆಟ್ ಕಿತ್ತಿರುವ ಶಮಿ, 2023ರ ಜೂನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೊನೆಯ ಬಾರಿಗೆ ಆಡಿದ್ದರು.







