ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಮುಹಮ್ಮದ್ ಶಮಿ, ಸಿದ್ದಾರ್ಥ್

ಮುಹಮ್ಮದ್ ಶಮಿ | Photo Credit : PTI
ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ಹಾಗೂ ಲಕ್ನೊ ಸೂಪರ್ ಜಯಂಟ್ಸ್ ತಂಡಗಳು 2027ರ ಋತುವಿನ ಐಪಿಎಲ್ಗಿಂತ ಮೊದಲು ಮೂವರು ಆಟಗಾರರ ವಿನಿಮಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ. ಭಾರತದ ಅನುಭವಿ ವೇಗದ ಬೌಲರ್ ಮುಹಮ್ಮದ್ ಶಮಿ ಹಾಗೂ ಎಡಗೈ ಸ್ಪಿನ್ನರ್ ಎಂ. ಸಿದ್ದಾರ್ಥ್ ಅವರು ಜೈಪುರ ಮೂಲದ ಫ್ರಾಂಚೈಸಿಯ ಪಾಲಾಗಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ ಲಕ್ನೋ ತಂಡದ ತೆಕ್ಕೆಗೆ ಸೇರಿದ್ದಾರೆ.
10 ಕೋ.ರೂ.ಗೆ ಲಕ್ನೊ ತಂಡವನ್ನು ಸೇರಿದ್ದ ಶಮಿ ಅವರು ಪರಿಷ್ಕೃತ ಸಂಭಾವನೆ 8 ಕೋ.ರೂ.ಗೆ ರಾಜಸ್ಥಾನ ರಾಯಲ್ಸ್ಗೆ ಸೇರ್ಪಡೆಯಾದರು. 36ರ ವಯಸ್ಸಿನ ಶಮಿ ಅವರು ರಾಜಸ್ಥಾನ ತಂಡದ ಬೌಲಿಂಗ್ ವಿಭಾಗದಲ್ಲಿ ಗಮನಾರ್ಹ ಅನುಭವ ನೀಡಲಿದ್ದಾರೆ. ಶಮಿ 132 ಐಪಿಎಲ್ ಪಂದ್ಯಗಳಲ್ಲಿ ಒಟ್ಟು 145 ವಿಕೆಟ್ಗಳನ್ನು ಪಡೆದಿದ್ದಾರೆ.
2026ರ ಋತುವಿನಲ್ಲಿ ಲಕ್ನೊ ಪರ 13 ಪಂದ್ಯಗಳನ್ನು ಆಡಿದ್ದ ಶಮಿ 9ರ ಇಕಾನಮಿ ರೇಟ್ನಲ್ಲಿ 12 ವಿಕೆಟ್ಗಳನ್ನು ಪಡೆದಿದ್ದರು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 9 ರನ್ ನೀಡಿ ಎರಡು ವಿಕೆಟ್ಗಳನ್ನು ಪಡೆದಿದ್ದರು. ನಿರ್ಣಾಯಕ ಸಂದರ್ಭದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದ್ದರು.
ಬಲಗೈ ವೇಗದ ಬೌಲರ್ ಶಮಿ ರಾಜಸ್ಥಾನ ತಂಡದ ಪ್ರಮುಖ ಬೌಲರ್ ಜೋಫ್ರಾ ಆರ್ಚರ್ರೊಂದಿಗೆ ಆಡಲಿದ್ದಾರೆ. 2024ರ ನಂತರ ಶಮಿ ಪವರ್ಪ್ಲೇನಲ್ಲಿ 8.76ರ ಇಕಾನಮಿ ರೇಟ್ನಲ್ಲಿ ಒಟ್ಟು 14 ವಿಕೆಟ್ಗಳನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರು.
ರಾಜಸ್ಥಾನ ತಂಡವು ಶಮಿ ಅವರೊಂದಿಗೆ ಎಂ.ಸಿದ್ದಾರ್ಥ್ರನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಎಡಗೈ ಸ್ಪಿನ್ನರ್ ಲಕ್ನೊ ತಂಡದಿಂದ 75 ಲಕ್ಷ ರೂ.ಗೆ ರಾಜಸ್ಥಾನ ತಂಡವನ್ನು ಸೇರಿದ್ದಾರೆ. ತನ್ನ ನಿಖರ ಹಾಗೂ ನಿಯಂತ್ರಿತ ಬೌಲಿಂಗ್ನಿಂದ ಖ್ಯಾತಿ ಪಡೆದಿರುವ ಸಿದ್ದಾರ್ಥ್ ಇತ್ತೀಚೆಗೆ ತಮಿಳುನಾಡು ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜಸ್ಥಾನ ತಂಡದಿಂದ 2.4 ಕೋ.ರೂ.ಗೆ ಲಕ್ನೊ ತಂಡಕ್ಕೆ ವರ್ಗಾವಣೆಯಾಗಿರುವ ಕರ್ರನ್ ಆಲ್ರೌಂಡ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ. ಇಂಗ್ಲೆಂಡ್ ಆಟಗಾರ ಕರ್ರನ್ ತನ್ನ ಐಪಿಎಲ್ ವೃತ್ತಿಜೀವನದಲ್ಲಿ 59 ವಿಕೆಟ್ಗಳನ್ನು ಪಡೆದಿದ್ದಲ್ಲದೆ, ಒಟ್ಟು 997 ರನ್ ಗಳಿಸಿದ್ದಾರೆ.
2022ರ ಟಿ-20 ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದಲ್ಲಿ ಸರಣಿಶ್ರೇಷ್ಠ ಹಾಗೂ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಕರ್ರನ್ ಐಪಿಎಲ್ನಲ್ಲಿ ಮೂರನೇ ಫ್ರಾಂಚೈಸಿ ಪರ ಆಡಲು ಸಜ್ಜಾಗಿದ್ದಾರೆ. ಈ ಹಿಂದೆ ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಗಾಯದ ಸಮಸ್ಯೆಯ ಕಾರಣದಿಂದ 2026ರ ಐಪಿಎಲ್ ಋತುವಿನಿಂದ ವಂಚಿತರಾಗಿದ್ದರು.






