ACC Men's U19 Asia Cup 2026 | ಕೊನೆಯ ಎಸೆತದಲ್ಲಿ ಬೌಂಡರಿ; ಪಾಕಿಸ್ತಾನವನ್ನು ಮಣಿಸಿ ಭಾರತಕ್ಕೆ ಏಷ್ಯಾ ಕಪ್ ಕಿರೀಟ ತೊಡಿಸಿದ ಮೋಹಿತ್ ಉಲ್ವಾ!
ರೋಚಕ ಫೈನಲ್ ನಲ್ಲಿ 10ನೇ ಕ್ರಮಾಂಕದಲ್ಲಿ ಅಬ್ಬರಿಸಿದ ಯುವ ಬ್ಯಾಟರ್

Photo Credit : X
ಅಲ್ ಅಮೆರಾತ್(ಒಮಾನ್): ಕೊನೆಯ ಎಸೆತದವರೆಗೂ ಕೌತುಕ ಉಳಿಸಿಕೊಂಡ ರೋಚಕ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಒಂದು ವಿಕೆಟ್ನಿಂದ ಮಣಿಸಿದ ಭಾರತ ತಂಡ ಅಂಡರ್-19 ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸೋಲಿನ ದವಡೆಯಿಂದ ತಂಡವನ್ನು ಪಾರು ಮಾಡಿದ 10ನೇ ಕ್ರಮಾಂಕದ ಬ್ಯಾಟರ್ ಮೋಹಿತ್ ಉಲ್ವಾ ಭಾರತದ ಗೆಲುವಿನ ಹೀರೋ ಎನಿಸಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು. ಉಸ್ಮಾನ್ ಖಾನ್ 111 ಎಸೆತಗಳಲ್ಲಿ 107 ರನ್ ಸಿಡಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಬ್ದುಲ್ ಖಾದಿರ್ 54 ಎಸೆತಗಳಲ್ಲಿ 80 ರನ್ ಗಳಿಸಿದರೆ, ನಾಯಕ ಫರ್ಹಾನ್ ಯೂಸುಫ್ 60 ಎಸೆತಗಳಲ್ಲಿ 63 ರನ್ ಗಳಿಸಿದರು. ಭಾರತದ ಪರ ಕಾವ್ಯ ಪಟೇಲ್ 68 ರನ್ ನೀಡಿ 4 ವಿಕೆಟ್ ಪಡೆದರೆ, ಚಿಗುರುಪಾಟಿ ವೆಂಕಟ 40 ರನ್ ನೀಡಿ 3 ವಿಕೆಟ್ ಕಬಳಿಸಿದರು.
338 ರನ್ ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಲಕ್ಷ್ಯ ರಾಜಚಂದಾನಿ 80 ರನ್ ಗಳಿಸಿ ಆಸರೆಯಾದರು. ಆರ್ಯವೀರ್ ಸೆಹ್ವಾಗ್ 58 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ಗಳು ಉರುಳಿದ ಪರಿಣಾಮ ಭಾರತ ಸಂಕಷ್ಟಕ್ಕೆ ಸಿಲುಕಿತು. ಮನಾಲ್ ಚೌಹಾಣ್ 32 ಎಸೆತಗಳಲ್ಲಿ 47 ರನ್ ಗಳಿಸಿ ಹೋರಾಟ ಮುಂದುವರಿಸಿದರು.
37ನೇ ಓವರ್ ನಲ್ಲಿ ಅನ್ವಯ್ ದ್ರಾವಿಡ್ ರನ್ ಔಟ್ ಆದಾಗ ಭಾರತದ ಗೆಲುವಿನ ಆಸೆ ಬಹುತೇಕ ಕಮರಿದಂತಾಗಿತ್ತು. ಈ ಹಂತದಲ್ಲಿ ಮನಾಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ ಜೋಡಿ 57 ರನ್ ಗಳ ನಿರ್ಣಾಯಕ ಜೊತೆಯಾಟವಾಡಿ ಪಂದ್ಯಕ್ಕೆ ಹೊಸ ತಿರುವು ನೀಡಿತು. ಇವರ ಹೋರಾಟ ಭಾರತವನ್ನು ಮತ್ತೆ ಗೆಲುವಿನ ಹಾದಿಗೆ ತಂದಿತು.
48ನೇ ಓವರ್ ನಲ್ಲಿ ಮನಾಲ್ ಚೌಹಾಣ್ ವಿಕೆಟ್ ಕಳೆದುಕೊಂಡರೂ ಮೋಹಿತ್ ಎದೆಗುಂದಲಿಲ್ಲ. ಚಿಗುರುಪಾಟಿ ವೆಂಕಟ ಕೂಡ ನಿರ್ಣಾಯಕ ಸಂದರ್ಭದಲ್ಲಿ ಅಮೂಲ್ಯ ರನ್ ಗಳನ್ನು ಸೇರಿಸಿ ಹೋರಾಟಕ್ಕೆ ಬಲ ತುಂಬಿದರು.
ಗೆಲುವಿಗೆ ಕೊನೆಯ ಎಸೆತದವರೆಗೂ ಕಾಯಬೇಕಾದ ಒತ್ತಡದ ಸನ್ನಿವೇಶದಲ್ಲಿ ಮೋಹಿತ್ ತೋರಿದ ಸಾಹಸ ಅಸಾಧಾರಣವಾಗಿತ್ತು. ಅಹ್ಮದ್ ಹುಸೇನ್ ಎಸೆದ 50ನೇ ಓವರ್ ನ ಕೊನೆಯ ಎಸೆತವನ್ನು ಕ್ರೀಸ್ ನಿಂದ ಮುಂದೆ ಬಂದು ವೈಡ್ ಲಾಂಗ್-ಆಫ್ ದಿಕ್ಕಿನತ್ತ ಬಲವಾಗಿ ಬಾರಿಸಿದರು. ಚೆಂಡು ಬೌಂಡರಿ ಗೆರೆ ದಾಟುತ್ತಿದ್ದಂತೆ ಭಾರತದ ಗೆಲುವಿನ ಸಂಭ್ರಮ ಮುಗಿಲು ಮುಟ್ಟಿತು. ಕೇವಲ 26 ಎಸೆತಗಳನ್ನು ಎದುರಿಸಿದ ಮೋಹಿತ್ ಅಜೇಯ 49 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆ ಮೂಲಕ ಭಾರತವು 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು.
ಗೆಲುವಿನ ಬಳಿಕ ಭಾರತದ ಧ್ವಜವನ್ನು ಹೊದ್ದುಕೊಂಡು ಮೋಹಿತ್ ಮೈದಾನದಲ್ಲಿ ಓಡಾಡಿ ಸಂಭ್ರಮಿಸಿದರು. ಭಾರತೀಯ ಆಟಗಾರರು ಅವರತ್ತ ಓಡಿಬಂದು ಅಭಿನಂದಿಸಿದರು. ಆರ್ಯನ್ ಸವ್ಸಾನಿ ಮತ್ತು ಕುಶಾಗ್ರ ಓಜಾ ಅವರು ಮೋಹಿತ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ವಿಜಯೋತ್ಸವ ಆಚರಿಸಿದರು.
►ಪಂದ್ಯದ ಸಂಕ್ಷಿಪ್ತ ಸ್ಕೋರ್
►ಪಾಕಿಸ್ತಾನ U19: 337/9 (50 ಓವರ್ ಗಳು)
ಉಸ್ಮಾನ್ ಖಾನ್ 107 (111), ಅಬ್ದುಲ್ ಖಾದಿರ್ 80 (54), ಫರ್ಹಾನ್ ಯೂಸುಫ್ 63 (60), ಹಯಾಮ್ ಖಾನ್ 21 (23), ಅಹ್ಮದ್ ಹುಸೇನ್ 17 (20). ಭಾರತದ ಪರ ಕಾವ್ಯ ಪಟೇಲ್ 4/68, ಚಿಗುರುಪಾಟಿ ವೆಂಕಟ 3/40.
►ಭಾರತ U19: 339/9 (50 ಓವರ್ ಗಳು)
ಲಕ್ಷ್ಯ ರಾಜಚಂದಾನಿ 80, ಆರ್ಯವೀರ್ ಸೆಹ್ವಾಗ್ 58, ಮನಾಲ್ ಚೌಹಾಣ್ 47, ಮೋಹಿತ್ ಉಲ್ವಾ 49* (26), ಚಿಗುರುಪಾಟಿ ವೆಂಕಟ 11 (8).
ಫಲಿತಾಂಶ: ಭಾರತಕ್ಕೆ ಒಂದು ವಿಕೆಟ್ ಜಯ; ಅಂಡರ್-19 ಏಷ್ಯಾ ಕಪ್ ಚಾಂಪಿಯನ್.






