Asian Para Games 2026 |10 ಮೀಟರ್ ಏರ್ ರೈಫಲ್ : ಮೋನಾ ಅಗರ್ವಾಲ್ ಗೆ ಚಿನ್ನ; ಅವನಿ ಲೇಖರಾಗೆ ಬೆಳ್ಳಿ

ಮೋನಾ ಅಗರ್ವಾಲ್ (Photo: Olympics.com)
ಹೊಸದಿಲ್ಲಿ: ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ವಿಭಾಗದಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆಯನ್ನು ಮುರಿದ ಭಾರತದ ಮೋನಾ ಅಗರ್ವಾಲ್ ಚಿನ್ನದ ಪದಕ ಗೆದ್ದಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಶೂಟರ್, ಎರಡು ಬಾರಿ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಅವನಿ ಲೇಖರಾ ಬೆಳ್ಳಿ ಪದಕ ಗೆದ್ದಿದ್ದಾರೆ.
ರಾಜಸ್ಥಾನದ ಸಿಕಾರ್ ನ 38 ವರ್ಷದ ಮೋನಾ ಅಗರ್ವಾಲ್ ಫೈನಲ್ ನಲ್ಲಿ 250.0 ಅಂಕ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. 2024ರ ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಅವರು, ಈ ಬಾರಿ ಹಾಲಿ ಚಾಂಪಿಯನ್ ಅವನಿ ಲೇಖರಾ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ರಾಜಸ್ಥಾನದ 24 ವರ್ಷದ ಅವನಿ ಲೇಖರಾ ಫೈನಲ್ನಲ್ಲಿ 249.6 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು. ಮಹಿಳೆಯರ 10 ಮೀಟರ್ ಏರ್ ರೈಫಲ್ SH1 ವಿಭಾಗದಲ್ಲಿ ಎರಡು ಬಾರಿ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ಗೆದ್ದಿರುವ ಅವನಿ, ಕಳೆದ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲೂ ಇದೇ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.




