FIFA World Cup 2026 | ಅಳುತ್ತಿದ್ದ ಅಮ್ಮನನ್ನು ಅಪ್ಪಿಕೊಂಡು ಸಂತೈಸಿದ ಮೊರಾಕ್ಕೊ ಆಟಗಾರ: ವೀಡಿಯೋ ವೈರಲ್

ಮಾಂಟೆರೆ, ಜೂ.30: ಮೊರಾಕ್ಕೊ ತಂಡವು ಮಂಗಳವಾರ ನಡೆದ ಫಿಫಾ ವಿಶ್ವಕಪ್ ನ ಅಂತಿಮ-32ರ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 3-2 ಅಂತರದಿಂದ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ಗೆ ತಲುಪಿದ ತಕ್ಷಣ, ಸಹ ಆಟಗಾರರು ಸಂಭ್ರಮದಲ್ಲಿ ತೊಡಗಿದ್ದರೆ, ಪೆನಾಲ್ಟಿಯಲ್ಲಿ ನಿರ್ಣಾಯಕ ಗೋಲು ಗಳಿಸಿದ ಇಸ್ಮಾಯೀಲ್ ಸಾಯ್ಬರಿ ಸ್ಟೇಡಿಯಂನಲ್ಲಿದ್ದ ತಮ್ಮ ತಾಯಿಯಿದ್ದಲ್ಲಿಗೆ ಓಡೋಡಿ ಹೋದರು.
ಮಗನನ್ನು ಕಂಡ ತಾಯಿ ಜೋರಾಗಿ ಅಳಲಾರಂಭಿಸಿದರು. ತಮ್ಮ ತಾಯಿಯನ್ನು ಅಪ್ಪಿಕೊಂಡು ಸಂತೈಸಿದ ಇಸ್ಮಾಯೀಲ್, ಅವರ ಹಣೆಗೆ ಎರಡು ಬಾರಿ ಮುತ್ತಿಟ್ಟರು. ಫುಟ್‌ಬಾಲ್ ನ ಅತಿದೊಡ್ಡ ವೇದಿಕೆಯಲ್ಲಿ ಇದೊಂದು ವೈಯಕ್ತಿಕ ಭಾವನಾತ್ಮಕ ಕ್ಷಣವಾಗಿತ್ತು.
ತಾಯಿ-ಮಗನ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾವಿರಾರು ಜನರು ಇದನ್ನು ಪಂದ್ಯಾವಳಿಯ ಅತ್ಯಂತ ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದಾರೆ.
ಇಸ್ಮಾಯೀಲ್ ಹುಟ್ಟುವಾಗಲೇ ಅವರ ಪಾದಗಳು ವಿರೂಪವಾಗಿದ್ದವು. ಚಿಕ್ಕವನಿದ್ದಾಗ ಸಹಾಯವಿಲ್ಲದೆ ನಡೆಯಲು ಅವರಿಗೆ ಸಾಧ್ಯವಾಗಿರಲಿಲ್ಲ. 'ಈ ಮಗು ಎಂದಿಗೂ ನಡೆಯಲು ಸಾಧ್ಯವಿಲ್ಲ' ಎಂದು ವೈದ್ಯರು ಇಸ್ಮಾಯೀಲ್ ಅವರ ಹೆತ್ತವರಿಗೆ ಹೇಳಿದ್ದರು. ಆ ಎಲ್ಲ ಅಂಗವೈಕಲ್ಯಗಳನ್ನು ಮೆಟ್ಟಿ ನಿಂತಿರುವ ಇಸ್ಮಾಯೀಲ್ ಇದೀಗ ವಿಶ್ವಕಪ್ ನಲ್ಲಿ ಮಿಂಚುತ್ತಿದ್ದಾರೆ.






