ಶ್ರೀಲಂಕಾದಲ್ಲಿ ಮೂರನೇ ಕ್ರಮಾಂಕದಲ್ಲಿ ಗರಿಷ್ಠ ರನ್ : ರಾಹುಲ್ ದ್ರಾವಿಡ್, ಚೇತೇಶ್ವರ ಪೂಜಾರ ದಾಖಲೆ ಪಟ್ಟಿಗೆ ಪಡಿಕ್ಕಲ್ ಸೇರ್ಪಡೆ

ದೇವದತ್ ಪಡಿಕ್ಕಲ್ |Photo Credit : x \ @TheCricpixs
ಗಾಲೆ, ಆ.16: ಶ್ರೀಲಂಕಾ ತಂಡದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಮೂರನೇ ಕ್ರಮಾಂಕದ ಆಟಗಾರ ದೇವದತ್ತ ಪಡಿಕ್ಕಲ್ 230 ಎಸೆತಗಳಲ್ಲಿ 167 ರನ್ ಗಳಿಸಿ ಔಟಾದರು. ಈ ಮೂಲಕ ಕನ್ನಡಿಗನ ಆಕರ್ಷಕ ಇನಿಂಗ್ಸ್ಗೆ ತೆರೆ ಬಿತ್ತು.
ಶನಿವಾರ ಮೊದಲ ದಿನದಾಟದಲ್ಲಿ ತನ್ನ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದ್ದ ಪಡಿಕ್ಕಲ್ ಮಳೆ ಬಾಧಿತ ಎರಡನೇ ದಿನದಾಟದಲ್ಲೂ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ಇದೇ ಮೊದಲ ಬಾರಿ ಟೆಸ್ಟ್ ಕ್ರಿಕೆಟ್ನಲ್ಲಿ 150ಕ್ಕೂ ಅಧಿಕ ರನ್ ಗಳಿಸಿದರು.
ಎಡಗೈ ಬ್ಯಾಟರ್ ತನ್ನ ಸ್ಮರಣೀಯ ಇನಿಂಗ್ಸ್ನಲ್ಲಿ 15 ಬೌಂಡರಿ, ಒಂದು ಸಿಕ್ಸರ್ ಸಿಡಿಸಿದ್ದಾರೆ.ಮಳೆಯಿಂದಾಗಿ ಪದೇ ಪದೇ ಅಡಚಣೆ ಉಂಟಾಗಿದ್ದರೂ ಭಾರತದ ಇನಿಂಗ್ಸ್ಗೆ ಬಲ ತುಂಬಿದರು.
150ಕ್ಕೂ ಅಧಿಕ ರನ್ ಗಳಿಸಿದ ಪಡಿಕ್ಕಲ್ ಶ್ರೀಲಂಕಾದ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು. ರಾಹುಲ್ ದ್ರಾವಿಡ್ ಹಾಗೂ ಚೇತೇಶ್ವರ ಪೂಜಾರ ಅವರಿದ್ದ ಪಟ್ಟಿಗೆ ಸೇರಿದ್ದಾರೆ. ದ್ರಾವಿಡ್ 2009ರಲ್ಲಿ ಅಹ್ಮದಾಬಾದ್ನಲ್ಲಿ 3ನೇ ಕ್ರಮಾಂಕದಲ್ಲಿ 177 ರನ್ ಗಳಿಸಿದ್ದರೆ, ಚೇತೇಶ್ವರ ಪೂಜಾರ 2017ರಲ್ಲಿ ಗಾಲೆಯಲ್ಲಿ 153 ರನ್ ದಾಖಲಿಸಿದ್ದರು.
ಮಳೆಯಿಂದಾಗಿ ಎರಡನೇ ದಿನದಾಟವು ನಾಲ್ಕೂವರೆ ಗಂಟೆ ವಿಳಂಬವಾಗಿ ಆರಂಭವಾಯಿತು. ಈ ಎಲ್ಲ ಅಡೆತಡೆಗಳ ನಡುವೆ ಪಡಿಕ್ಕಲ್ ಇನಿಂಗ್ಸ್ ಅತ್ಯಂತ ಮಹತ್ವ ಪಡೆದಿದೆ.
ಕ್ರೀಸ್ಗೆ ಅಂಟಿಕೊಂಡಿದ್ದ ಪಡಿಕ್ಕಲ್ರನ್ನು ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪೆವಿಲಿಯನ್ಗೆ ಕಳುಹಿಸಿದರು. ಜಯಸೂರ್ಯ ಬೌಲಿಂಗ್ನಲ್ಲಿ ಮುನ್ನುಗ್ಗಿ ಆಡಲು ಹೋದ ಪಡಿಕ್ಕಲ್ ವಿಕೆಟ್ಕೀಪರ್ ನಿರೋಶನ್ ಡಿಕ್ವೆಲ್ಲಾರಿಂದ ಸ್ಟಂಪ್ ಔಟಾದರು.
24ರ ವಯಸ್ಸಿನ ಪಡಿಕ್ಕಲ್ ಪೆವಿಲಿಯನ್ಗೆ ವಾಪಸಾಗುತ್ತಿದ್ದಾಗ ಗಾಲೆ ಪ್ರೇಕ್ಷಕರು ಎದ್ದುನಿಂತು ಗೌರವಿಸಿದರು. ಭಾರತದ ಸಹ ಆಟಗಾರರು ಪಡಿಕ್ಕಲ್ ಪ್ರಯತ್ನವನ್ನು ಶ್ಲಾಘಿಸಿದರು.
ಸುದರ್ಶನ್ ಗಾಯಗೊಂಡ ಕಾರಣ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಪಡೆದ ಪಡಿಕ್ಕಲ್ ಜೀವನಶ್ರೇಷ್ಠ ಪ್ರದರ್ಶನದೊಂದಿಗೆ ಉತ್ತರ ಕೊಟ್ಟಿದ್ದಾರೆ. ಸ್ವಾತಂತ್ರ್ಯೋತ್ಸವ ದಿನದಂದು ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.






