ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಸಿಕ್ಸರ್: ರೋಹಿತ್ ಶರ್ಮಾ ಹೆಸರಿಗೆ ದಾಖಲೆ

Photo - BCCI
ರಾಂಚಿ, ನ. 30: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್ ಗಳನ್ನು ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ರವಿವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಅವರು ಈ ದಾಖಲೆಯನ್ನು ಸ್ಥಾಪಿಸಿದ್ದಾರೆ.
ತನ್ನ 352ನೇ ಏಕದಿನ ಸಿಕ್ಸ್ ಬಾರಿಸುವ ಮೂಲಕ ಅವರು ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು. ಅದಕ್ಕೂ ಮೊದಲು ಈ ದಾಖಲೆಯು 351 ಸಿಕ್ಸರ್ ಗಳನ್ನು ಬಾರಿಸಿರುವ ಪಾಕಿಸ್ತಾನಿ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೆಸರಿನಲ್ಲಿತ್ತು.
ರವಿವಾರದ ಪಂದ್ಯದ ಮೊದಲು 349 ಸಿಕ್ಸರ್ ಗಳನ್ನು ಬಾರಿಸಿದ್ದ ರೋಹಿತ್ ಗೆ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಕೇವಲ ಮೂರು ಸಿಕ್ಸರ್ ಗಳ ಅಗತ್ಯವಿತ್ತು.
ಭಾರತೀಯ ಇನಿಂಗ್ಸ್ನ 20ನೇ ಓವರ್ ನಲ್ಲಿ ಅವರು ದಾಖಲೆಯ ಸಿಕ್ಸರನ್ನು ಸಿಡಿಸಿದರು. ತನ್ನ ದಾಖಲೆಯನ್ನು ನಿರ್ಮಿಸಲು ಶಾಹಿದ್ ಅಫ್ರಿದಿಗೆ ತೆಗೆದುಕೊಂಡ ಇನಿಂಗ್ಸ್ ಗಳಿಗಿಂತ ಸರಿಯಾಗಿ 100 ಕಡಿಮೆ ಇನಿಂಗ್ಸ್ ಗಳನ್ನು ರೋಹಿತ್ ತನ್ನ ದಾಖಲೆಗೆ ತೆಗೆದುಕೊಂಡರು. ಈ ದಾಖಲೆಯು ಹಲವು ವರ್ಷಗಳಿಂದ ಅಫ್ರಿದಿ ಹೆಸರಿನಲ್ಲಿತ್ತು.
►ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳನ್ನು ಬಾರಿಸಿದ ಬ್ಯಾಟರ್ ಗಳು
1. ರೋಹಿತ್ ಶರ್ಮಾ (ಭಾರತ)- 352
2. ಶಾಹಿದ್ ಅಫ್ರಿದಿ (ಪಾಕಿಸ್ತಾನ)- 351
3. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)- 331
4. ಸನತ್ ಜಯಸೂರ್ಯ (ಶ್ರೀಲಂಕಾ)- 270
5. ಎಮ್.ಎಸ್. ಧೋನಿ (ಭಾರತ)- 229







