ಎಂ.ಎಸ್.ಧೋನಿ ದಾಖಲೆ ಮುರಿದ ಆರ್ಸಿಬಿ ಬ್ಯಾಟರ್ ಜಿತೇಶ್ ಶರ್ಮಾ

ಜಿತೇಶ್ ಶರ್ಮಾ , ಎಂ.ಎಸ್.ಧೋನಿ | PC : X
ಲಕ್ನೊ: ಜಿತೇಶ್ ಶರ್ಮಾರ ಸ್ಫೋಟಕ ಇನಿಂಗ್ಸ್(85 ರನ್, 33 ಎಸೆತ), ವಿರಾಟ್ ಕೊಹ್ಲಿ ಹಾಗೂ ಮಯಾಂಕ್ ಅಗರ್ವಾಲ್ ಅವರ ನಿರ್ಣಾಯಕ ಕೊಡುಗೆಗಳ ನೆರವಿನಿಂದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೊ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿರುವ ಆರ್ಸಿಬಿ ತಂಡ ಐಪಿಎಲ್ ನ ಕ್ವಾಲಿಫೈಯರ್-1ಕ್ಕೆ ಅರ್ಹತೆ ಪಡೆದಿದೆ.
ಗೆಲ್ಲಲು 228 ರನ್ ಗುರಿ ಬೆನ್ನಟ್ಟುವಾಗ ಜಿತೇಶ್ ಹಾಗೂ ಮಯಾಂಕ್ ಶತಕದ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.ಜಿತೇಶ್ 6ನೇ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಗರಿಷ್ಠ ಸ್ಕೋರ್(ಔಟಾಗದೆ 85) ಗಳಿಸಿ ಐಪಿಎಲ್ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2018ರ ಐಪಿಎಲ್ ನಲ್ಲಿ ಆರ್ಸಿಬಿ ವಿರುದ್ಧ ಎಂ.ಎಸ್. ಧೋನಿ ನಿರ್ಮಿಸಿದ್ದ ದಾಖಲೆಯನ್ನು(70 ರನ್)ಮುರಿದಿದ್ದಾರೆ.
ಜಿತೇಶ್ ಹಾಗೂ ಮಯಾಂಕ್ 107 ರನ್ ಸೇರಿಸಿ ರನ್ ಚೇಸ್ ವೇಳೆ 5ನೇ ವಿಕೆಟ್ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಗರಿಷ್ಠ ಜೊತೆಯಾಟ ನಡೆಸಿ ದಾಖಲೆ ನಿರ್ಮಿಸಿದರು. 2016ರಲ್ಲ್ ಕ್ವಾಲಿಫೈಯರ್-1ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಎಬಿಡಿ ವಿಲಿಯರ್ಸ್ ಹಾಗೂ ಇಕ್ಬಾಲ್ ಅಬ್ದುಲ್ಲಾ ದಾಖಲಿಸಿರುವ 91 ರನ್ ಜೊತೆಯಾಟವನ್ನು ಮುರಿದರು.
ಈ ಗೆಲುವು ಆರ್ಸಿಬಿ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದ್ದು, ಐಪಿಎಲ್ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ ತವರಿನ ಹೊರಗೆ ಆಡಿರುವ ಎಲ್ಲ 7 ಪಂದ್ಯಗಳನ್ನು ಗೆದ್ದಿರುವ ಮೊದಲ ತಂಡ ಎನಿಸಿಕೊಂಡಿದೆ. ಈ ಮೂಲಕ ಕೆಕೆಆರ್ ಹಾಗೂ ಮುಂಬೈ ಇಂಡಿಯನ್ಸ್ ನಿರ್ಮಿಸಿರುವ ದಾಖಲೆಯನ್ನು ಮುರಿದಿದೆ. ಈ ಎರಡು ತಂಡಗಳು 2012ರಲ್ಲಿ ತವರಿನಿಂದ ಹೊರಗೆ ಆಡಿರುವ 8 ಪಂದ್ಯಗಳ ಪೈಕಿ ತಲಾ 7ರಲ್ಲಿ ಜಯ ಸಾಧಿಸಿದ್ದವು.
►ರನ್ಚೇಸ್ ವೇಳೆ 6 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದ ಆಟಗಾರರ ಗರಿಷ್ಠ ಸ್ಕೋರ್ಗಳು
ಔಟಾಗದೆ 85(33 ಎಸೆತ)-ಜಿತೇಶ್ ಶರ್ಮಾ(ಆರ್ಸಿಬಿ)-ಎಲ್ಎಸ್ಜಿ ವಿರುದ್ಧ,ಲಕ್ನೊ, 2025
ಔಟಾಗದೆ 70(34 ಎಸೆತ)-ಎಂ.ಎಸ್. ಧೋನಿ(ಸಿಎಸ್ಕೆ), ಆರ್ಸಿಬಿ ವಿರುದ್ಧ, ಬೆಂಗಳೂರು, 2018
ಔಟಾಗದೆ 70(31 ಎಸೆತ)-ಆಂಡ್ರೆ ರಸೆಲ್(ಕೆಕೆಆರ್)-ಪಂಜಾಬ್ ಕಿಂಗ್ಸ್ ವಿರುದ್ಧ, ಮುಂಬೈ, 2022
70(47 ಎಸೆತ)-ಕಿರೋನ್ ಪೊಲಾರ್ಡ್(ಎಂಐ)ಆರ್ಸಿಬಿ ವಿರುದ್ಧ, ಬೆಂಗಳೂರು, 2017
68(30)-ಡ್ವೇಯ್ನ್ ಬ್ರಾವೊ(ಸಿಎಸ್ಕೆ)-ಮುಂಬೈ ವಿರುದ್ಧ, ಮುಂಬೈ, 2018







