2014ರ ಮ್ಯಾಂಚೆಸ್ಟರ್ ಟೆಸ್ಟ್ನಲ್ಲಿ ಮಿಂಚಿದ್ದ ಎಂ.ಎಸ್. ಧೋನಿ!

ಎಂ.ಎಸ್. ಧೋನಿ | PC : PTI
ಮ್ಯಾಂಚೆಸ್ಟರ್: ಓಲ್ಡ್ ಟ್ರಾಫೋರ್ಡ್ನಲ್ಲಿ ಜುಲೈ 23ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಲಾರ್ಡ್ಸ್ನಲ್ಲಿ ಕೇವಲ 22 ರನ್ ಅಂತರದಿಂದ ಸೋತಿರುವ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡವು ಸದ್ಯ ಸರಣಿಯಲ್ಲಿ ಹಿನ್ನಡೆಯಲ್ಲಿದೆ. ಮ್ಯಾಂಚೆಸ್ಟರ್ನಲ್ಲಿ ಮರಳಿ ಹೋರಾಡಬೇಕಾದ ಒತ್ತಡದಲ್ಲಿದೆ.
ಕೊನೆಯ ಬಾರಿ ಓಲ್ಡ್ ಟ್ರಾಫೋರ್ಡ್ನಲ್ಲಿ ಟೀಮ್ ಇಂಡಿಯಾವು ಆಗಸ್ಟ್, 2014ರಲ್ಲಿ ಆಡಿತ್ತು. ಆಗ ಭಾರತ ತಂಡವು ಮೊದಲ 6 ಓವರ್ಗಳಲ್ಲಿ 8 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ಗಳನ್ನು ಕಳೆದುಕೊಂಡು ನಾಟಕೀಯ ಕುಸಿತ ಕಂಡಿತ್ತು. ಅಂತಿಮವಾಗಿ ಮೊದಲ ಇನಿಂಗ್ಸ್ನಲ್ಲಿ ಕೇವಲ 152 ರನ್ ಗಳಿಸಿತ್ತು. ಜೇಮ್ಸ್ ಆ್ಯಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಭಾರತದ ಅಗ್ರ ಸರದಿಗೆ ಮಾರಕವಾಗಿದ್ದರು. ಮುರಳಿ ವಿಜಯ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಬೇಗನೆ ಔಟಾಗಿದ್ದರು.
ಆಗಿನ ನಾಯಕ ಎಂ.ಎಸ್. ಧೋನಿ 133 ಎಸೆತಗಳಲ್ಲಿ 71 ರನ್ ಗಳಿಸಿ ಇನಿಂಗ್ಸ್ ಆಧರಿಸಿದ್ದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ 15 ಬೌಂಡರಿಗಳನ್ನು ಗಳಿಸುವ ಮೂಲಕ ಒತ್ತಡ ಕಡಿಮೆ ಮಾಡಲು ಯತ್ನಿಸಿದ್ದರು. ಧೋನಿ ಅವರ 71 ರನ್ ಇನಿಂಗ್ಸ್ನಲ್ಲಿ ದಾಖಲಾದ ಗರಿಷ್ಠ ಸ್ಕೋರಾಗಿದೆ. ಧೋನಿ ಹಾಗೂ ಆರ್.ಅಶ್ವಿನ್ 7ನೇ ವಿಕೆಟ್ಗೆ 40 ರನ್ ಜೊತೆಯಾಟ ನಡೆಸಿದ್ದರು.
ಧೋನಿಯ ಪ್ರತಿರೋಧದ ಹೊರತಾಗಿಯೂ ಭಾರತ ತಂಡವು ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವಲ್ಲಿ ವಿಫಲವಾಗಿ ಅಂತಿಮವಾಗಿ ಇನಿಂಗ್ಸ್ ಹಾಗೂ 54 ರನ್ಗಳಿಂದ ಈ ಪಂದ್ಯವನ್ನು ಸೋತಿತ್ತು.
ಇಂಗ್ಲೆಂಡ್ ತಂಡವು ಭಾರತದ ಮೊದಲ ಇನಿಂಗ್ಸ್ಗೆ ಉತ್ತರವಾಗಿ 367 ರನ್ ಗಳಿಸಿತ್ತು. ಜೋ ರೂಟ್ 77 ರನ್, ಜೋಸ್ ಬಟ್ಲರ್ ಹಾಗೂ ಇಯಾನ್ ಬೆಲ್ ಅರ್ಧಶತಕದ ಕೊಡುಗೆ ನೀಡಿದ್ದರು. ಭಾರತ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ ಕೇವಲ 161 ರನ್ ಗಳಿಸಿ ಆಲೌಟಾಗಿತ್ತು.
2025ರಲ್ಲಿ ಟೀಮ್ ಇಂಡಿಯಾವು ಓಲ್ಡ್ ಟ್ರಾಫೋರ್ಡ್ಗೆ ಮರಳಿದೆ. ಶುಭಮನ್ ಗಿಲ್ ಅವರು ಈ ಬಾರಿ ಅದೃಷ್ಟ ಬದಲಾಗುವ ವಿಶ್ವಾಸದಲ್ಲಿದ್ದಾರೆ. ಈ ಪಂದ್ಯವನ್ನು ಭಾರತವು ಗೆದ್ದುಕೊಂಡರೆ ಸರಣಿಯು 2-2ರಿಂದ ಸಮಬಲಗೊಳ್ಳಲಿದ್ದು, ಈ ತಿಂಗಳಾಂತ್ಯದಲ್ಲಿ ದಿ ಓವಲ್ನಲ್ಲಿ 5ನೇ ಹಾಗೂ ನಿರ್ಣಾಯಕ ಪಂದ್ಯವು ನಡೆಯಲಿದೆ.







