ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯಕ್ಕೆ ದಿಲ್ಲಿ ಪ್ರಯಾಣ ರದ್ದುಪಡಿಸಿದ ಎಂ.ಎಸ್.ಧೋನಿ

ಎಂ.ಎಸ್.ಧೋನಿ | Phhoto Credit : PTI
ಹೊಸದಿಲ್ಲಿ, ಮೇ 4: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಮಂಗಳವಾರ ನಡೆಯಲಿರುವ ಪಂದ್ಯಕ್ಕಾಗಿ ಪ್ರಮುಖ ಬ್ಯಾಟರ್ ಎಂ.ಎಸ್.ಧೋನಿ ಹೊಸದಿಲ್ಲಿಗೆ ಪ್ರಯಾಣಿಸದಿರಲು ನಿರ್ಧರಿಸಿದ್ದು, ಇದು ಈ ವರ್ಷದ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಅಭಿಯಾನಕ್ಕೆ ತೀವ್ರ ಹಿನ್ನಡೆಯಾಗಿದೆ.
ಹಿರಿಯ ಆಟಗಾರ ಧೋನಿ ಅವರು ತನ್ನ ಕಾಲು ನೋವಿನಿಂದ ಚೇತರಿಸಿಕೊಳ್ಳಲು ಚೆನ್ನೈನಲ್ಲಿ ಉಳಿದುಕೊಳ್ಳಲಿದ್ದಾರೆ. ಈ ಋತುವಿನಲ್ಲಿ ಧೋನಿಯ ಲಭ್ಯತೆಯ ಕುರಿತಂತೆ ಹೊಸ ಕಳವಳ ವ್ಯಕ್ತವಾಗಿದೆ.
ದಿಲ್ಲಿಗೆ ಪ್ರಯಾಣಿಸಿರುವ ಸಿಎಸ್ಕೆ ತಂಡದಲ್ಲಿ ಧೋನಿಯ ಅನುಪಸ್ಥಿತಿಯು ಅವರು ಪಂದ್ಯಕ್ಕೆ ಇನ್ನೂ ಸಜ್ಜಾಗಿಲ್ಲ ಎಂಬುದರ ಸೂಚನೆಯಾಗಿದೆ. ಧೋನಿ 2026ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಈ ತನಕ ಒಂದೂ ಪಂದ್ಯವನ್ನು ಆಡಿಲ್ಲ.
‘‘ಪಂದ್ಯಾವಳಿಯ ಒಂದು ಹಂತದಲ್ಲಿ ಧೋನಿ ಲಭ್ಯವಿರಲಿದ್ದಾರೆ’’ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕಾರಿಗಳು ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಧೋನಿಗೆ ಸಿಎಸ್ಕೆ ತಂಡಕ್ಕೆ ಮರಳಲು ಬಾಗಿಲು ಈಗಲೂ ತೆರೆದಿದೆ ಎಂಬ ಸುಳಿವು ನೀಡಿದ್ದಾರೆ.
ಸಿಎಸ್ಕೆ ಪ್ಲೇ ಆಫ್ ವಿಶ್ವಾಸ ಡೋಲಾಯಮಾನ: ಒಂಭತ್ತು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ದಾಖಲಿಸಿರುವ ಸಿಎಸ್ಕೆ ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನು ಐದು ಲೀಗ್ ಪಂದ್ಯಗಳು ಆಡಲು ಬಾಕಿ ಇದೆ. ಪ್ಲೇ ಆಫ್ನಲ್ಲಿ ಸ್ಥಾನ ಗಿಟ್ಟಿಸಲು ಸಿಎಸ್ಕೆ ತಂಡವು ಕನಿಷ್ಠ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಬೇಕಾಗಿದೆ.
ಮೇ 6ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಪಂದ್ಯದ ನಂತರ ಸಿಎಸ್ಕೆ ತಂಡವು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದೆ. ಲಕ್ನೋ ಸೂಪರ್ ಜಯಂಟ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳ ವಿರುದ್ಧ ಆಡಲಿದೆ.
ಧೋನಿಯ ನಾಯಕತ್ವ ಹಾಗೂ ಫಿನಿಶಿಂಗ್ ಸಾಮರ್ಥ್ಯವು ಸಿಎಸ್ಕೆ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಅವರ ನಿರಂತರ ಅನುಪಸ್ಥಿತಿಯು ಮೈದಾನದ ಒಳಗೆ ಹಾಗೂ ಹೊರಗೆ ಗಮನಾರ್ಹ ಶೂನ್ಯ ಸೃಷ್ಟಿ ಮಾಡಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿ
ಸಿಎಸ್ಕೆ ತಂಡವು ಧೋನಿ ಅವರ ಫಿಟ್ನೆಸ್ ಬಗ್ಗೆ ಚಿಂತಿತವಾಗಿದ್ದರೆ, ಮುಂಬೈ ಇಂಡಿಯನ್ಸ್ ತಂಡ ಕೂಡ ರೋಹಿತ್ ಶರ್ಮಾರ ದೈಹಿಕ ಕ್ಷಮತೆಯತ್ತ ನಿಗಾವಹಿಸಿದೆ. ಮಂಡಿರಜ್ಜು ಗಾಯದಿಂದ ರೋಹಿತ್ ವಾಪಸಾಗುವ ಕುರಿತು ಅನಿಶ್ಚತತೆ ಮುಂದುವರಿದಿದೆ.
ಐದು ಪಂದ್ಯಗಳಿಂದ ವಂಚಿತರಾಗಿರುವ ರೋಹಿತ್, ಇತ್ತೀಚೆಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿರಂತರ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.
ಪಂದ್ಯಾವಳಿಯು ನಿರ್ಣಾಯಕ ಹಂತ ತಲುಪಿದ ಹಿನ್ನೆಲೆಯಲ್ಲಿ ಧೋನಿ ಹಾಗೂ ರೋಹಿತ್ರಂತಹ ಪ್ರಮುಖ ಆಟಗಾರರು ಗಾಯಗೊಂಡಿರುವುದು ಉಭಯ ತಂಡಗಳ ಫಾರ್ಮ್ ಹಾಗೂ ಫಿಟ್ನೆಸ್ ಸವಾಲುಗಳ ಮೇಲೆ ಪರಿಣಾಮಬೀರಿದೆ.






