ಸಿಎಸ್ಕೆ ತಂಡದಲ್ಲಿ ಮುಂದುವರಿಯಲಿರುವ ಧೋನಿ?

Photo PTI
ಚೆನ್ನೈ, ಆ. 7: ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ತಾನು ಆಡುತ್ತೇನೆಯೇ, ಇಲ್ಲವೇ ಎನ್ನುವ ಕುರಿತ ನಿಗೂಢತೆಯನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದುವರಿಸಿಕೊಂಡು ಹೋಗಿದ್ದಾರೆ.
ಐಪಿಎಲ್ನಲ್ಲಿ ಧೋನಿಯ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಕಳೆದ ಋತುವಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಗಾಯದಿಂದಾಗಿ ತಂಡದಿಂದ ಹೊರಬಿದ್ದಾಗ ಅವರ ಸ್ಥಾನವನ್ನು ಧೋನಿ ವಹಿಸಿಕೊಂಡರು. ಆದರೆ, ಆ ಪಂದ್ಯಾವಳಿಯುದ್ದಕ್ಕೂ ಅವರ ನಿವೃತ್ತಿ ಕುರಿತ ಊಹಾಪೋಹಗಳು ಕೇಳಿಬಂದವು. ಆದರೆ, ಅಧಿಕೃತವಾಗಿ ಧೋನಿಯಿಂದಾಗಲಿ, ಅವರ ತಂಡದಿಂದಾಗಲಿ ಯಾವುದೂ ಬರಲಿಲ್ಲ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಅವರ ಭವಿಷ್ಯದ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಕೇಳಲಾಯಿತು. ಆ ಪಶ್ನೆಗಳಿಗೂ ಅವರು ನಿಗೂಢವಾಗಿಯೇ ಉತ್ತರಿಸಿದರು.
‘‘ಈ ವಿಷಯದ ಬಗ್ಗೆ ನಿರ್ಧರಿಸಲು ಇನ್ನೂ ತುಂಬಾ ಸಮಯವಿದೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೇನೆ. ಆದರೆ, ಹಳದಿ ಜರ್ಸಿಯಲ್ಲಿ ಮರಳುವ ಬಗ್ಗೆ ನೀವು ಕೇಳುತ್ತಿರುವುದಾದರೆ, ನಾನು ಆಡುವುದಿದ್ದರೂ, ಆಡದಿದ್ದರೂ ಯಾವತ್ತೂ ಹಳದಿ ಜರ್ಸಿಯನ್ನೇ ಧರಿಸುತ್ತೇನೆ. ಅದು ಬೇರೆ ವಿಷಯ’’ ಎಂದು ಧೋನಿ ಹೇಳಿದರು.







