IPLನಿಂದ ಹೊರಗುಳಿದ ಕ್ವಿಂಟನ್ ಡಿಕಾಕ್, ರಾಜ್ ಅಂಗದ್

ಕ್ವಿಂಟನ್ ಡಿಕಾಕ್, ರಾಜ್ ಅಂಗದ್ | Photo Credit : PTI
ಮುಂಬೈ, ಮೇ 19: ಮುಂಬೈ ಇಂಡಿಯನ್ಸ್ ತಂಡವು 2026ರ ಐಪಿಎಲ್ ಟೂರ್ನಿಯ ಕೊನೆಯ ಹಂತಕ್ಕಿಂತ ಮೊದಲು ತೀವ್ರ ಹಿನ್ನಡೆ ಅನುಭವಿಸಿದೆ. ತಂಡದ ಇಬ್ಬರು ಆಟಗಾರರಾದ ಕ್ವಿಂಟನ್ ಡಿಕಾಕ್ ಹಾಗೂ ರಾಜ್ ಅಂಗದ್ ಬಾವಾ ಪ್ರಸಕ್ತ ಋತುವಿನ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಐದು ಬಾರಿಯ ಚಾಂಪಿಯನ್ ಮುಂಬೈ ತಂಡವು ಈಗಾಗಲೇ ಪ್ಲೇಆಫ್ ರೇಸ್ ನಿಂದ ಹೊರಗುಳಿದಿದೆ.
ಪಂದ್ಯಾವಳಿಯ ವೇಳೆ ಉಂಟಾದ ಗಾಯಗಳಿಂದಾಗಿ ಈ ಇಬ್ಬರು ಆಟಗಾರರು ತಮ್ಮ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡ ಖಚಿತಪಡಿಸಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯಕ್ಕೂ ಮೊದಲು ಡಿಕಾಕ್ ಅವರ ಎಡಗೈ ಮಣಿಕಟ್ಟಿಗೆ ಗಾಯವಾಗಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾದ ಅನುಭವಿ ಎಡಗೈ ಬ್ಯಾಟರ್ ಈ ವರ್ಷದ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಡಿಕಾಕ್ ಏಪ್ರಿಲ್ 23ರಂದು ಮುಂಬೈ ತಂಡದ ಪರ ಕೊನೆಯ ಪಂದ್ಯ ಆಡಿದ್ದರು. ಈ ಋತುವಿನಲ್ಲಿ ಮೂರು ಇನಿಂಗ್ಸ್ಗಳಲ್ಲಿ 132 ರನ್ ಗಳಿಸಿದ್ದರು. ಇದರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಔಟಾಗದೆ ಗಳಿಸಿದ್ದ 112 ರನ್ ಕೂಡ ಸೇರಿವೆ.
ಇದೇ ವೇಳೆ, ಚಂಡಿಗಡದ ಆಲ್ರೌಂಡರ್ ರಾಜ್ ಅಂಗದ್ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ತಂಡ ಆಡಿದ್ದ ಹಿಂದಿನ ಪಂದ್ಯದ ವೇಳೆ ಗಾಯಗೊಂಡಿದ್ದರು. 23ರ ಹರೆಯದ ರಾಜ್ ಈ ಋತುವಿನಲ್ಲಿ ಮೂರು ಪಂದ್ಯಗಳನ್ನು ಆಡಿದ್ದರು. 2025ರ IPLನಲ್ಲೂ ಕೇವಲ ಮೂರು ಪಂದ್ಯಗಳನ್ನಷ್ಟೇ ಆಡಿದ್ದರು.
ಐಪಿಎಲ್ ನಿಯಮಗಳ ಪ್ರಕಾರ ಡಿಕಾಕ್ ಹಾಗೂ ರಾಜ್ ಅಂಗದ್ ಬದಲಿಗೆ ಆಡುವ ಆಟಗಾರರನ್ನು ನಂತರ ಪ್ರಕಟಿಸಲಾಗುವುದು ಎಂದು ಮುಂಬೈ ಇಂಡಿಯನ್ಸ್ ತಿಳಿಸಿದೆ.
ಈ ವರ್ಷದ ಐಪಿಎಲ್ ಮುಂಬೈ ತಂಡದ ಪಾಲಿಗೆ ನಿರಾಶಾದಾಯಕವಾಗಿ ಪರಿಣಮಿಸಿದೆ. 12 ಪಂದ್ಯಗಳಿಂದ ಕೇವಲ ನಾಲ್ಕು ಅಂಕ ಗಳಿಸಿರುವ ಮುಂಬೈ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಈ ಋತುವಿನಲ್ಲಿ ಮುಂಬೈ ತಂಡಕ್ಕೆ ಇನ್ನೆರಡು ಪಂದ್ಯಗಳು ಬಾಕಿ ಇವೆ. ಮೇ 20ರಂದು ಕೋಲ್ಕತದಲ್ಲಿ ಕೆಕೆಆರ್ ಹಾಗೂ ಮೇ 24ರಂದು ಮುಂಬೈನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ. ಮುಂಬೈ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದರೆ, ಕೆಕೆಆರ್ ಹಾಗೂ ರಾಜಸ್ಥಾನ ತಂಡಗಳು ಅರ್ಹತೆಗಾಗಿ ಹೋರಾಡಲಿವೆ.






