ಐಪಿಎಲ್ ಪ್ಲೇಆಫ್ನಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್

Photo Credit : PTI
ಮುಂಬೈ, ಮೇ 11: ರವಿವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ಲೇಆಫ್ನಿಂದ ಹೊರಬಿದ್ದಿದೆ.
ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು ಎರಡು ವಿಕೆಟ್ಗಳಿಂದ ರೋಮಾಂಚಕಾರಿಯಾಗಿ ಸೋಲಿಸಿದೆ. ಇದು ಮುಂಬೈ ಇಂಡಿಯನ್ಸ್ನ 11 ಪಂದ್ಯಗಳಲ್ಲಿ ಎಂಟನೇ ಸೋಲಾಗಿದೆ.
ಮುಂಬೈ ಇಂಡಿಯನ್ಸ್ ತನ್ನ ತಂಡವನ್ನು ಆರಿಸುವಾಗ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುತ್ತದೆ. ಈ ಬಾರಿಯೂ ಹಾಗೆಯೇ ಮಾಡಿದೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ಹಾರ್ದಿಕ್ ಪಾಂಡ್ಯರನ್ನು ತನ್ನ ತಂಡದ ನಾಯಕನಾಗಿ ನೇಮಿಸಿತು ಹಾಗೂ ಟಿ20 ವಿಶ್ವಕಪ್ ವಿಜೇತ ಭಾರತೀಯ ತಂಡದ ನಾಯಕರಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ರನ್ನು ತಂಡಕ್ಕೆ ಸೇರಿಸಿಕೊಂಡಿತು.
ಆದರೆ, ಕಾಲಿನ ಮೀನಖಂಡ ಗಾಯದಿಂದ ಬಳಲುತ್ತಿರುವ ರೋಹಿತ್ ಶರ್ಮಾ ಆರು ಪಂದ್ಯಗಳಿಂದ ಹೊರಗಿದ್ದರು. ಬೆನ್ನು ನೋವಿನಿಂದಾಗಿ ನಾಯಕ ಹಾರ್ದಿಕ್ ಪಾಂಡ್ಯ ಮೂರು ಪಂದ್ಯಗಳಿಂದ ಹೊರಗಿದ್ದರು. ಸ್ಪಿನ್ ಬೌಲಿಂಗ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಭುಜದ ಗಾಯದಿಂದ ಬಳಲುತ್ತಿದ್ದರು. ಹಾಗಾಗಿ, ಮುಂಬೈ ಇಂಡಿಯನ್ಸ್ ಪದೇ ಪದೇ ತನ್ನ ತಂಡವನ್ನು ಬದಲಿಸಬೇಕಾಯಿತು.
ಪ್ರಮುಖ ಆಟಗಾರರ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ನ ಅಭಿಯಾನವು ಹಳಿತಪ್ಪಿತು ಎಂದು ತಂಡದ ಪ್ರಧಾನ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.
‘‘ನಾವು ತುಂಬಾ ಗಾಯದ ಸಮಸ್ಯೆಗಳನ್ನು ಎದುರಿಸಿದೆವು. ಆಟಗಾರರು ನಿರಂತರವಾಗಿ ಗಾಯಗೊಂಡರು. ಕೆಲವು ಆಟಗಾರರು ಪಂದ್ಯಗಳಿಗೆ ಲಭ್ಯರಾಗಲಿಲ್ಲ. ಹಾಗಾಗಿ, ತಂಡದಲ್ಲಿ ನಿರಂತರವಾಗಿ ಬದಲಾವಣೆಗಳನ್ನು ಮಾಡಬೇಕಾಯಿತು’’ ಎಂದು ಅವರು ನುಡಿದರು.






