ಎಂಸಿಎಯಿಂದ ಎನ್ಒಸಿ ಲಭ್ಯ: ಮುಂಬೈ ತಂಡ ತೊರೆಯಲಿರುವ ಪೃಥ್ವಿ ಶಾ

Photo : X/@BCCI
ಮುಂಬೈ: ಮುಂಬೈ ಕ್ರಿಕೆಟ್ ಸಂಸ್ಥೆಯು(ಎಂಸಿಎ) ಪೃಥ್ವಿ ಶಾಗೆ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್ಒಸಿ)ನೀಡಿದೆ. ಶಾ ಅವರು ಬೇರೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಪರ ಆಡಲು ತನಗೆ ಎನ್ಒಸಿ ನೀಡುವಂತೆ ಸೋಮವಾರ ಇ-ಮೇಲ್ ಮೂಲಕ ಮನವಿ ಮಾಡಿದ್ದರು.
ಈ ಬೆಳವಣಿಗೆಯನ್ನು ದೃಢಪಡಿಸಿರುವ ಎಂಸಿಎ ಕಾರ್ಯದರ್ಶಿ ಅಭಯ್ ಹಡಪ, ‘‘ಪೃಥ್ವಿ ಶಾ ಅವರಲ್ಲಿ ಅಪಾರ ಪ್ರತಿಭೆ ಇದೆ. ಮುಂಬೈ ಕ್ರಿಕೆಟ್ಗೆ ಗಣನೀಯ ಕೊಡುಗೆ ನೀಡಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳನ್ನು ಕೋರುತ್ತೇವೆ’’ ಎಂದರು.
ಆ ನಂತರ ಹೇಳಿಕೆಯೊಂದನ್ನು ನೀಡಿರುವ ಎಂಸಿಎ, ಹಲವು ವರ್ಷಗಳಿಂದ ಶಾ ನೀಡಿರುವ ಕೊಡುಗೆಗಳನ್ನು ಕೊಂಡಾಡಿದೆ. ಅವರಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದೆ.
ಮುಂಬರುವ ದೇಶೀಯ ಋತುವಿನಲ್ಲಿ ಇನ್ನೊಂದು ರಾಜ್ಯ ಕ್ರಿಕೆಟ್ ಸಂಸ್ಥೆಯಡಿ ವೃತ್ತಿಪರ ಕ್ರಿಕೆಟ್ ಆಡುವ ಅವಕಾಶ ಲಭಿಸಿದೆ ಎಂದು ಎಂಸಿಎಗೆ ಬರೆದ ಪತ್ರದಲ್ಲಿ 25ರ ಹರೆಯದ ಶಾ ಹೇಳಿದ್ದಾರೆ.
ಭಾರತದ ಅಂಡರ್-19 ಕ್ರಿಕೆಟ್ ತಂಡದ ಮಾಜಿ ನಾಯಕ ಶಾ ಅವರನ್ನು ಕಳೆದ ಋತುವಿನಲ್ಲಿ ಮುಂಬೈನ ರಣಜಿ ಟ್ರೋಫಿ ತಂಡದಿಂದ ಕೈಬಿಡಲಾಗಿತ್ತು. ಅವರ ಫಿಟ್ನೆಸ್ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿ ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಂಡಿತ್ತು.
2022ರಲ್ಲಿ ವಿಜಯ್ ಹಝಾರೆ ಟೂರ್ನಿಯಲ್ಲಿ ಆಡಿದ ನಂತರ ಶಾ ಅವರು ಲಿಸ್ಟ್ ಎ ಕ್ರಿಕೆಟ್ನಲ್ಲಿ ಆಡಿಲ್ಲ. 2 ವರ್ಷಗಳ ಹಿಂದೆ ಮುಂಬೈ ಪರ ಆಡಿದಾಗ 5 ಇನಿಂಗ್ಸ್ಗಳಲ್ಲಿ 32, 54, 39,51 ಹಾಗೂ 10 ರನ್ ಗಳಿಸಿದ್ದರು.
ಈ ವರ್ಷಾರಂಭದಲ್ಲಿ ಯಶಸ್ವಿ ಜೈಸ್ವಾಲ್ ಕೂಡ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಎನ್ಒಸಿ ಪಡೆದು ಗೋವಾ ರಣಜಿ ತಂಡದ ಪರ ಆಡಲು ಸಜ್ಜಾಗಿದ್ದರು. ಆ ನಂತರ ಅವರು ತಮ್ಮ ನಿರ್ಧಾರವನ್ನು ಬದಲಿಸಿ ಮುಂಬೈ ತಂಡದಲ್ಲೇ ಉಳಿದುಕೊಂಡಿದ್ದಾರೆ.
ಅಗ್ರ ಸರದಿಯ ಬ್ಯಾಟರ್ ಪೃಥ್ವಿ ಶಾಗೆ ಹಲವು ರಾಜ್ಯ ಘಟಕಗಳಿಂದ ಆಫರ್ಗಳು ಬಂದಿದ್ದು, ಅವರೀಗ ತಮ್ಮ ಆಯ್ಕೆಗಳತ್ತ ನೋಡುತ್ತಿದ್ದಾರೆ.