ಮುಂಬೈಗೆ ಭಾರೀ ಅಂತರದ ಸೋಲು: ಹಾರ್ದಿಕ್ ಪಾಂಡ್ಯ ನೀಡಿದ ಕಾರಣ ಏನು ಗೊತ್ತೇ?

PC: x.com/IS_Netwrk29
ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸರ್ವಾಂಗೀಣ ಪ್ರದರ್ಶನದಿಂದಾಗಿ ಮುಂಬೈ ಇಂಡಿಯನ್ಸ್ ತಂಡ 103 ರನ್ಗಳ ಭಾರೀ ಅಂತರದ ಸೋಲು ಅನುಭವಿಸಿದೆ. ಇದು ಐಪಿಎಲ್ ಇತಿಹಾಸದಲ್ಲೇ ಮುಂಬೈ ಇಂಡಿಯನ್ಸ್ಗೆ ಅತಿದೊಡ್ಡ ಅಂತರದ ಸೋಲು ಎನಿಸಿದೆ.
ಸಂಜು ಸ್ಯಾಮ್ಸನ್ ಅವರ ಭರ್ಜರಿ ಶತಕ (54 ಎಸೆತಗಳಲ್ಲಿ ಅಜೇಯ 101) ನೆರವಿನಿಂದ ಸಿಎಸ್ಕೆ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆ ಹಾಕಿದರೆ, ಮುಂಬೈ ಇಂಡಿಯನ್ಸ್ 19 ಓವರ್ಗಳಲ್ಲಿ 104 ರನ್ಗಳಿಗೆ ಸರ್ವಪತನ ಕಂಡಿತು.
ಎಂಐ ನಾಯಕ ಹಾರ್ದಿಕ್ ಪಾಂಡ್ಯ ಪ್ರಕಾರ, ತಂಡ ಪವರ್ಪ್ಲೇಯಲ್ಲಿ ಕಳಪೆ ಆರಂಭ ಪಡೆದದ್ದೇ ಸೋಲಿಗೆ ಕಾರಣವಾಯಿತು. ಮುಂಬೈ ಒಂದು ಹಂತದಲ್ಲಿ 2.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿತ್ತು. ಡ್ಯಾನಿಷ್ ಮೇಲ್ವರ್ ಮೊದಲ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ನಮನ್ ಧರ್ ಮೂರು ಎಸೆತಗಳಲ್ಲಿ ಸೊನ್ನೆ ಸುತ್ತಿದರು. ಕ್ವಿಂಟನ್ ಡಿ ಕಾಕ್ 7 ರನ್ಗೆ ವಿಕೆಟ್ ಒಪ್ಪಿಸಿದರು.
ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ 73 ರನ್ಗಳ ಪಾಲುದಾರಿಕೆಯೊಂದಿಗೆ ಪ್ರತಿರೋಧ ತೋರಿದರು. ಆದರೆ ಇವರು ಬೇರ್ಪಟ್ಟ ಬಳಿಕ ಸಿಎಸ್ಕೆ ಪ್ರಾಬಲ್ಯ ಎದ್ದು ಕಂಡಿತು.
"ನನ್ನ ಪ್ರಕಾರ ಪವರ್ಪ್ಲೇಯಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುವುದು ಯಾವಾಗಲೂ ದೊಡ್ಡ ನಷ್ಟ. ರನ್ ಬೆನ್ನಟ್ಟುವಾಗ ಇದನ್ನು ಸರಿಪಡಿಸಿಕೊಳ್ಳುವುದು ಕಷ್ಟ" ಎಂದು ಪಾಂಡ್ಯ ಅಭಿಪ್ರಾಯಪಟ್ಟರು.
ಎರಡನೇ ಇನಿಂಗ್ಸ್ನಲ್ಲಿ ಪಿಚ್ ಬದಲಾಯಿತೇ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, "ಅದನ್ನು ನಾನು ಹೇಳುವುದಿಲ್ಲ. ಅದನ್ನು ಹೇಳಲು ನಾನು ಅಧಿಕೃತ ವ್ಯಕ್ತಿಯಲ್ಲ. ಅವರು ಒಳ್ಳೆಯದಾಗಿ ಬ್ಯಾಟ್ ಮಾಡಿ 207 ರನ್ ಕಲೆ ಹಾಕಿದರು. ಅದೇ ಟ್ರ್ಯಾಕ್ನಲ್ಲಿ, ಅದೇ ಮಣ್ಣಿನಲ್ಲಿ ನಾವು ಕೂಡಾ ಒಳ್ಳೆಯದಾಗಿ ಬ್ಯಾಟ್ ಮಾಡಬೇಕಿತ್ತು" ಎಂದು ಪ್ರತಿಕ್ರಿಯಿಸಿದರು.






