ಮುಶೀರ್ ಖಾನ್, ಋತುರಾಜ್ ಗಾಯಕ್ವಾಡ್ ಅರ್ಧ ಶತಕ : ಉತ್ತರ ವಲಯ ವಿರುದ್ಧ ಗೆಲುವಿನ ವಿಶ್ವಾಸದಲ್ಲಿ ಪಶ್ಚಿಮ ವಲಯ

ಋತುರಾಜ್ ಗಾಯಕ್ವಾಡ್ | Photo Credit : PTI
ಬೆಂಗಳೂರು: ಮೂರನೇ ಕ್ರಮಾಂಕದ ಬ್ಯಾಟರ್ ಮುಶೀರ್ ಖಾನ್(96 ರನ್, 126 ಎಸೆತ, 8 ಬೌಂಡರಿ, 2 ಸಿಕ್ಸರ್), ನಾಯಕ ಋತುರಾಜ್ ಗಾಯಕ್ವಾಡ್(66 ರನ್, 70 ಎಸೆತ, 7 ಬೌಂಡರಿ)ಅರ್ಧಶತಕದ ಕೊಡುಗೆಯ ನೆರವಿನಿಂದ ಪಶ್ಚಿಮ ವಲಯ ತಂಡ ಉತ್ತರ ವಲಯ ವಿರುದ್ಧದ ದುಲೀಪ್ ಟ್ರೋಫಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ.
ಮೂರನೇ ದಿನವಾದ ಮಂಗಳವಾರ ಗೆಲ್ಲಲು 287 ರನ್ ಗುರಿ ಬೆನ್ನಟ್ಟಿದ ಪಶ್ಚಿಮ ವಲಯ ತಂಡವು ದಿನದಾಟದಂತ್ಯಕ್ಕೆ 51 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 220 ರನ್ ಗಳಿಸಿದೆ. ಗೆಲ್ಲಲು ಇನ್ನೂ 67 ರನ್ ಗಳಿಸುವ ಅಗತ್ಯವಿದೆ. ಉರ್ವಿಲ್ ಪಟೇಲ್(ಔಟಾಗದೆ 17 ರನ್, 17 ಎಸೆತ)ಕ್ರೀಸ್ ಕಾಯ್ದುಕೊಂಡಿದ್ದಾರೆ. ತನುಶ್ ಕೋಟ್ಯಾನ್, ಶಾರ್ದುಲ್ ಠಾಕೂರ್ ಹಾಗೂ ತುಷಾರ್ ದೇಶಪಾಂಡೆ ಇನ್ನಷ್ಟೇ ಬ್ಯಾಟಿಂಗ್ ಮಾಡಬೇಕಾಗಿದೆ.
ಒಂದು ಹಂತದಲ್ಲಿ 3 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದ್ದ ಪಶ್ಚಿಮ ವಲಯವು ದಿಢೀರನೆ 4 ವಿಕೆಟ್ಗಳನ್ನು ಕಳೆದುಕೊಂಡ ಪರಿಣಾಮ ಪಂದ್ಯವು ರೋಚಕ ಘಟ್ಟ ತಲುಪಿದೆ. ಅಬಿದ್ ಮುಷ್ತಾಕ್(2-56)ಯಶಸ್ವಿ ಬೌಲರ್ ಎನಿಸಿಕೊಂಡರು.
ಪೃಥ್ವಿ ಶಾ(6 ರನ್), ಹಾರ್ವಿಕ್ ದೇಸಾಯಿ(2 ರನ್)ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಿದ್ದ ಪಶ್ಚಿಮ ವಲಯ ಕಳಪೆ ಆರಂಭ ಪಡೆದಿತ್ತು. ತಂಡವು 84 ರನ್ಗೆ ಮೂರು ವಿಕೆಟ್ ಕಳೆದುಕೊಂಡಾಗ ಜೊತೆಯಾದ ಮುಶೀರ್ ಖಾನ್ ಹಾಗೂ ಋತುರಾಜ್ ನಾಲ್ಕನೇ ವಿಕೆಟ್ಗೆ 111 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರ ವಲಯ ತಂಡವು 251 ರನ್ ಗಳಿಸಿತು. ಇದಕ್ಕುತ್ತರವಾಗಿ ಪಶ್ಚಿಮ ವಲಯ ತಂಡ 187 ರನ್ಗೆ ಆಲೌಟಾಯಿತು. ಮೊದಲ ಇನಿಂಗ್ಸ್ನಲ್ಲಿ 64 ರನ್ ಮುನ್ನಡೆ ಪಡೆದಿದ್ದ ಉತ್ತರ ವಲಯವು ಮಂಗಳವಾರ 4 ವಿಕೆಟ್ ನಷ್ಟಕ್ಕೆ 107 ರನ್ನಿಂದ ಬ್ಯಾಟಿಂಗ್ ಮುಂದುವರಿಸಿತು. ಆಯುಷ್ ಬದೋನಿ ಅರ್ಧಶತಕ ಗಳಿಸಿದ್ದು 2ನೇ ಇನಿಂಗ್ಸ್ನಲ್ಲಿ 222 ರನ್ ಗಳಿಸಿದ ಉತ್ತರ ವಲಯವು ಪಶ್ಚಿಮ ವಲಯದ ಗೆಲುವಿಗೆ 287 ರನ್ ಗುರಿ ನೀಡಿತು.
ಪಶ್ಚಿಮ ವಲಯದ ಪರ ತನುಶ್ ಕೋಟ್ಯಾನ್ ಹಾಗೂ ಶಮ್ಸ್ ಮುಲಾನಿ ತಲಾ ನಾಲ್ಕು ವಿಕೆಟ್ಗಳನ್ನು ಪಡೆದರು.






