100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಮುಶ್ಫಿಕುರ್ರಹೀಂ

ಮುಶ್ಫಿಕುರ್ರಹೀಂ | Photo Credit : @BCBtigers
ಹೊಸದಿಲ್ಲಿ, ನ.20: ಬಾಂಗ್ಲಾದೇಶದ ಹಿರಿಯ ಕ್ರಿಕೆಟಿಗ ಮುಶ್ಫಿಕುರ್ರಹೀಂ ತಾನಾಡಿದ 100ನೇ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಗಳಿಸಿ ಇತಿಹಾಸ ನಿರ್ಮಿಸಿದರು. ಈ ಸಾಧನೆ ಮಾಡಿದ ವಿಶ್ವದ 11ನೇ ಆಟಗಾರ ಎನಿಸಿಕೊಂಡರು. ಈ ತನಕ ಭಾರತೀಯ ಬ್ಯಾಟರ್ ಗೂ ಸಾಧ್ಯವಾಗದ ಅಪರೂಪದ ಸಾಧನೆಯನ್ನು ಮಾಡಿದ್ದಾರೆ.
ಮೀರ್ಪುರದಲ್ಲಿ ನಡೆಯುತ್ತಿರುವ ಐರ್ಲ್ಯಾಂಡ್ರ ವಿರುದ್ಧದ ಎರಡನೇ ಟೆಸ್ಟ್ಪಂದ್ಯದ ವೇಳೆ ಈ ಸಾಧನೆ ಮಾಡಿದರು.
99 ರನ್ನಿಂದ 2ನೇ ದಿನವಾದ ಗುರುವಾರ ತನ್ನ ಬ್ಯಾಟಿಂಗ್ ಮುಂದುವರಿಸಿದ 38ರ ವಯಸ್ಸಿನ ಆಟಗಾರ ಮುಶ್ಫಿಕುರ್ರಹೀಂ ಒಂದು ರನ್ ಗಳಿಸಿ ಶತಕ ಪೂರೈಸಿದರು. ತನ್ನ ಹೆಲ್ಮೆಟ್ ತೆಗೆದು, ಎರಡೂ ಕೈಗಳನ್ನು ಮೇಲಕ್ಕೆತ್ತಿ ಸಂಭ್ರಮಾಚರಿಸಿದರು. ಶೇರ್-ಎ-ಬಾಂಗ್ಲಾ ಕ್ರೀಡಾಂಗಣದ ಪ್ರೇಕ್ಷಕರು ಈ ಐತಿಹಾಸಿಕ ಕ್ಷಣಕ್ಕಾಗಿ ಚಪ್ಪಾಳೆ ತಟ್ಟಿದರು. ಈ ವೇಳೆ ಐರ್ಲ್ಯಾಂಡ್ ಆಟಗಾರರು ಕರತಾಡನಗೈದು ಅಭಿನಂದಿಸಿದರು.
ಮುಶ್ಫಿಕುರ್ರಹೀಂ ಇದೀಗ ಲೆಜೆಂಡ್ಗಳಾದ ಕಾಲಿನ್ ಕೌಡ್ರೆ, ಜಾವೇದ್ ಮಿಯಾಂದಾದ್, ಗೋರ್ಡನ್ ಗ್ರೀನಿಡ್ಜ್, ಅಲೆಕ್ ಸ್ಟೀವರ್ಟ್, ಇನ್ಝಿಮಾಮುಲ್ ಹಕ್, ರಿಕಿ ಪಾಂಟಿಂಗ್, ಗ್ರೇಮ್ ಸ್ಮಿತ್, ಹಾಶೀಂ ಅಮ್ಲ, ಜೋ ರೂಟ್ ಹಾಗೂ ಡೇವಿಡ್ ವಾರ್ನರ್ ಅವರನ್ನೊಳಗೊಂಡ ವಿಶೇಷ ಕ್ಲಬ್ಗೆ ಸೇರ್ಪಡೆಯಾದರು.
ಮುಶ್ಫಿಕುರ್ರಹೀಂಗಿಂತ ಮೊದಲು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 10 ಕ್ರಿಕೆಟಿಗರು ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಗಳಿಸಿದ್ದರು.
214 ಎಸೆತಗಳಲ್ಲಿ ಐದು ಬೌಂಡರಿಗಳ ಸಹಿತ 106 ರನ್ ಗಳಿಸಿದ ಮುಶ್ಫಿಕುರ್ರಹೀಂ ತನ್ನ 13ನೇ ಟೆಸ್ಟ್ ಶತಕ ದಾಖಲಿಸಿದರು. ಬಾಂಗ್ಲಾದೇಶದ ಪರ ಗರಿಷ್ಠ ಟೆಸ್ಟ್ ಶತಕಗಳನ್ನು ಗಳಿಸಿರುವ ಮೂಮಿನುಲ್ ಹಕ್ ಅವರೊಂದಿಗೆ ದಾಖಲೆ ಹಂಚಿಕೊಂಡರು.
ಬಾಂಗ್ಲಾದೇಶ ತಂಡವು ಬುಧವಾರ ಮೊದಲ ದಿನದಾಟದಲ್ಲಿ 95 ರನ್ ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿದ್ದಾಗ ಮುಶ್ಫಿಕುರ್ರಹೀಂ ಕ್ರೀಸ್ ಗೆ ಇಳಿದಿದ್ದರು. ಮೊದಲ ಇನಿಂಗ್ಸ್ನ ಉತ್ತಮ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಮುಶ್ಫಿಕುರ್ರಹೀಂ ಶತಕ ಗಳಿಸಿದ ತಕ್ಷಣ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಹಂಫ್ರೀಸ್ ಎಸೆತದಲ್ಲಿ ಔಟಾಗಿ ಪೆವಿಲಿಯನ್ ಗೆ ತೆರಳುತ್ತಿದ್ದಾಗ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು.
ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 47 ರನ್ಗಳ ಅಂತರದಿಂದ ಗೆದ್ದುಕೊಂಡಿರುವ ಬಾಂಗ್ಲಾದೇಶ ತಂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮುಶ್ಫಿಕುರ್ರಹೀಂ 2005ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಚೊಚ್ಚಲ ಪಂದ್ಯವನ್ನು ಆಡಿದ್ದನ್ನು ಕಣ್ಣಾರೆ ಕಂಡಿರುವ ಸಹ ಆಟಗಾರ ಶಾಕೀಬ್ ಅಲ್ ಹಸನ್ ಫೇಸ್ ಬುಕ್ ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡರು. ಬಾಂಗ್ಲಾದೇಶದ ಅಸಂಖ್ಯಾತ ಕ್ರಿಕೆಟಿಗರಿಗೆ ಮುಶ್ಫಿಕುರ್ರಹೀಂ ಸ್ಫೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.
ಪಂದ್ಯ ಆರಂಭವಾಗುವ ಮೊದಲು ಮುಶ್ಫಿಕುರ್ರಹೀಂಗೆ ವಿಶೇಷ 100ನೇ ಟೆಸ್ಟ್ ಕ್ಯಾಪ್ ಹಾಗೂ ಸ್ಮರಣಿಕೆಯನ್ನು ಮಾಜಿ ನಾಯಕರಾದ ಹಬೀಬುಲ್ ಬಶರ್, ಅಕ್ರಂ ಖಾನ್, ಅಮೀನುಲ್ ಇಸ್ಲಾಮ್ ಹಾಗೂ ನಝ್ಮುಲ್ ಅಬೆದೀನ್ ಪ್ರದಾನಿಸಿದರು. ಮುಶ್ಫಿಕುರ್ರಹೀಂ ಅವರ ಕುಟುಂಬ ಸದಸ್ಯರು ಬಾಂಗ್ಲಾದೇಶದ ಓರ್ವ ಶ್ರೇಷ್ಠ ಕ್ರಿಕೆಟಿಗನ ಆಟವನ್ನು ಕಣ್ತುಂಬಿಕೊಂಡರು.
► 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ಆಟಗಾರರು
104-ಕಾಲಿನ್ ಕೌಡ್ರೆ(ಇಂಗ್ಲೆಂಡ್) ಆಸ್ಟ್ರೇಲಿಯದ ವಿರುದ್ಧ ಎಜ್ಬಾಸ್ಟನ್, 1968
145-ಜಾವೇದ್ ಮಿಯಾಂದಾದ್(ಪಾಕಿಸ್ತಾನ), ಭಾರತ ವಿರುದ್ಧ, ಲಾಹೋರ್, 1989
149-ಗೋರ್ಡನ್ ಗ್ರೀನಿಜ್(ವೆಸ್ಟ್ಇಂಡೀಸ್), ಇಂಗ್ಲೆಂಡ್ ವಿರುದ್ಧ, ಸೈಂಟ್ ಜಾನ್ಸ್, 1990
105-ಅಲೆಕ್ ಸ್ಟೀವರ್ಟ್(ಇಂಗ್ಲೆಂಡ್), ವೆಸ್ಟ್ಇಂಡೀಸ್ ವಿರುದ್ಧ ಓಲ್ಡ್ ಟ್ರಾಫೋರ್ಡ್, 2000
184-ಇನ್ಝಿಮಾಮುಲ್ ಹಕ್(ಪಾಕಿಸ್ತಾನ), ಭಾರತ ವಿರುದ್ಧ, ಬೆಂಗಳೂರು, 2005
120 ಹಾಗೂ 143-ರಿಕಿ ಪಾಂಟಿಂಗ್(ಆಸ್ಟ್ರೇಲಿಯ), ದಕ್ಷಿಣ ಆಫ್ರಿಕಾ ವಿರುದ್ಧ, ಸಿಡ್ನಿ, 2006
131-ಗ್ರೇಮ್ ಸ್ಮಿತ್(ದ.ಆಫ್ರಿಕಾ)ಇಂಗ್ಲೆಂಡ್ ವಿರುದ್ಧ, ದ ಓವಲ್,2012
134-ಹಾಶಿಂ ಅಮ್ಲ(ದ.ಆಫ್ರಿಕಾ), ಶ್ರೀಲಂಕಾ ವಿರುದ್ಧ, ಜೋಹಾನ್ಸ್ಬರ್ಗ್, 2017
218-ಜೋ ರೂಟ್(ಇಂಗ್ಲೆಂಡ್),ಭಾರತ ವಿರುದ್ಧ, ಚೆನ್ನೈ, 2021
200-ಡೇವಿಡ್ ವಾರ್ನರ್(ಆಸ್ಟ್ರೇಲಿಯ), ದಕ್ಷಿಣ ಆಫ್ರಿಕಾ ವಿರುದ್ಧ ಮೆಲ್ಬರ್ನ್, 2022
106-ಮುಶ್ಫಿಕುರ್ರಹೀಂ(ಬಾಂಗ್ಲಾದೇಶ),ಐರ್ಲ್ಯಾಂಡ್ ವಿರುದ್ಧ , ಮೀರ್ಪುರ, 2025







