ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಿದ ಮುಶ್ಫಿಕುರ್ರಹೀಂ

ಮುಶ್ಫಿಕುರ್ರಹೀಂ |PC : ICC
ಮೀರ್ಪುರ, ನ.23: ಬಾಂಗ್ಲಾದೇಶದ ಹಿರಿಯ ಬ್ಯಾಟರ್ ಮುಶ್ಫಿಕುರ್ರಹೀಂ ತನ್ನ 100ನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ 50ಕ್ಕೂ ಅಧಿಕ ರನ್ ಗಳಿಸುವ ಮೂಲಕ ಲೆಜೆಂಡರಿ ರಿಕಿ ಪಾಂಟಿಂಗ್ ನಂತರ ಈ ಸಾಧನೆ ಮಾಡಿದ ವಿಶ್ವದ ಎರಡನೇ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದರು.
ಮೊದಲ ಇನಿಂಗ್ಸ್ ನಲ್ಲಿ 106 ರನ್ ಹಾಗೂ ಎರಡನೇ ಇನಿಂಗ್ಸ್ ನಲ್ಲಿ 53 ರನ್ ಗಳಿಸಿರುವ ಮುಶ್ಫಿಕುರ್ರಹೀಂ ತನ್ನ 100ನೇ ಟೆಸ್ಟ್ನ ಎರಡೂ ಇನಿಂಗ್ಸ್ ಗಳಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಕೂಡ ಈ ಸಾಧನೆ ಮಾಡಿದ್ದಾರೆ. ಪಾಂಟಿಂಗ್ 2006ರಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ತಂಡಗಳ ನಡುವಿನ ಟೆಸ್ಟ್ ಪಂದ್ಯದ ವೇಳೆ 120 ಹಾಗೂ ಔಟಾಗದೆ 143 ರನ್ ಗಳಿಸಿದ್ದರು.
ತನ್ನ ಸ್ಮರಣೀಯ ಟೆಸ್ಟ್ ಪಂದ್ಯದಲ್ಲಿ ಮುಶ್ಫಿಕುರ್ರಹೀಂ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಸರಣಿಯಲ್ಲಿ ಒಟ್ಟು 13 ವಿಕೆಟ್ ಗಳನ್ನು ಪಡೆದಿರುವ ತೈಜುಲ್ ಇಸ್ಲಾಮ್ ‘ಸರಣಿಶ್ರೇಷ್ಠ’ಪ್ರಶಸ್ತಿ ಸ್ವೀಕರಿಸಿದರು.
‘‘ನಾನು ಈ ತನಕ 100 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇನ್ನಷ್ಟು ಪಂದ್ಯಗಳನ್ನು ಆಡಲು ಬಯಸಿದ್ದೇನೆ. ನಾನು ಪ್ರತೀ ಕ್ಷಣವನ್ನು ಆನಂದಿಸಿದ್ದೇನೆ. ಇಷ್ಟೊಂದು ಸಮಯ ನನ್ನ ದೇಶವನ್ನು ಪ್ರತಿನಿಧಿಸಿದ್ದು ನನ್ನ ಅದೃಷ್ಟ’’ ಎಂದು ಮುಶ್ಫಿಕುರ್ರಹೀಂ ಹೇಳಿದ್ದಾರೆ.
►ಕ್ಲೀನ್ ಸ್ವೀಪ್ ಸಾಧಿಸಿದ ಬಾಂಗ್ಲಾದೇಶ
ಶೇರ್-ಇ-ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ರವಿವಾರ ಕೊನೆಗೊಂಡಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಐರ್ಲ್ಯಾಂಡ್ ವಿರುದ್ಧ 217 ರನ್ ಅಂತರದಿಂದ ಜಯಶಾಲಿಯಾಗಿರುವ ಬಾಂಗ್ಲಾದೇಶ ತಂಡವು ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಗೆಲ್ಲಲು 509 ರನ್ ಗುರಿ ಬೆನ್ನಟ್ಟಿದ ಐರ್ಲ್ಯಾಂಡ್ ತಂಡವು ತನ್ನ ಎರಡನೇ ಇನಿಂಗ್ಸ್ ನಲ್ಲಿ 291 ರನ್ ಗಳಿಸಿ ಆಲೌಟಾಯಿತು.
ಸ್ಪಿನ್ನರ್ಗಳಾದ ತೈಜುಲ್ ಇಸ್ಲಾಮ್(4-104) ಹಾಗೂ ಹಸನ್ ಮುರಾದ್ ಬಾಂಗ್ಲಾದೇಶದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದರು. ಮೊದಲ ಇನಿಂಗ್ಸ್ ನಲ್ಲಿ 76 ರನ್ ಗೆ 4 ವಿಕೆಟ್ ಪಡೆದಿದ್ದ ತೈಜುಲ್ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಮುರಾದ್ ಎರಡನೇ ಇನಿಂಗ್ಸ್ ನಲ್ಲಿ 44 ರನ್ ಗೆ 4 ವಿಕೆಟ್ ಗಳನ್ನು ಉರುಳಿಸಿದ್ದಾರೆ.
ಐರ್ಲ್ಯಾಂಡ್ ಪರ ಕರ್ಟಿಸ್ ಕ್ಯಾಂಫರ್ 259 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿದರು. ಹ್ಯಾರಿ ಟೆಕ್ಟರ್ 50 ರನ್ ಕೊಡುಗೆ ನೀಡಿದರು. ಜೋರ್ಡನ್ ನೀಲ್ ಹಾಗೂ ಗವಿನ್ ಹಾಯ್ ಕ್ರಮವಾಗಿ 30 ಹಾಗೂ 37 ರನ್ ಕಲೆ ಹಾಕಿದರು.
ಮುಶ್ಫಿಕುರ್ರಹೀಂ(106 ರನ್)ಹಾಗೂ ಲಿಟನ್ ದಾಸ್(128 ರನ್)ಶತಕಗಳ ಸಹಾಯದಿಂದ ಬಾಂಗ್ಲಾದೇಶ ತಂಡವು ತನ್ನ ಮೊದಲ ಇನಿಂಗ್ಸ್ ನಲ್ಲಿ ಒಟ್ಟು 476 ರನ್ ಗಳಿಸಿದೆ. ಇದಕ್ಕೆ ಉತ್ತರವಾಗಿ ಐರ್ಲ್ಯಾಂಡ್ ತಂಡವು 265 ರನ್ ಗಳಿಸಿತು. ಬಾಂಗ್ಲಾದೇಶ ತಂಡವು ತನ್ನ ಎರಡನೇ ಇನಿಂಗ್ಸ್ ನಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 297 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.
ತೈಜುಲ್ ಇಸ್ಲಾಮ್ ವೇಗವಾಗಿ 250 ಟೆಸ್ಟ್ ವಿಕೆಟ್ ಗಳನ್ನು ಪಡೆದ ಎರಡನೇ ಎಡಗೈ ಸ್ಪಿನ್ನರ್ ಎನಿಸಿಕೊಂಡರು. ಶ್ರೀಲಂಕಾದ ಸ್ಪಿನ್ನರ್ ರಂಗನ ಹೆರಾತ್ 57 ಟೆಸ್ಟ್ ಹಾಗೂ 102 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು.
ಬಾಂಗ್ಲಾದೇಶ ತಂಡವು ಸಿಲ್ಹಟ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 147 ರನ್ಗಳ ಅಂತರದಿಂದ ಗೆದ್ದುಕೊಂಡಿತ್ತು.







