ಟೆಸ್ಟ್ ಕ್ರಿಕೆಟ್ನಲ್ಲಿ 7,000 ರನ್ ಗಳಿಸಿದ ಬಾಂಗ್ಲಾದೇಶದ ಮೊದಲ ಬ್ಯಾಟರ್ ಮುಶ್ಫಿಕುರ್ರಹೀಂ

Photo Credit: X/@AryanGoelNew
ಸಿಲ್ಹಟ್: ಬಾಂಗ್ಲಾದೇಶ ಕ್ರಿಕೆಟ್ ತಂಡದ ಹಿರಿಯ ಬ್ಯಾಟರ್ ಮುಶ್ಫಿಕುರ್ ರಹೀಂ ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 7,000 ರನ್ ಗಳಿಸಿದ ತನ್ನ ದೇಶದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ವೆಸ್ಟ್ಇಂಡೀಸ್ ವಿರುದ್ಧ ಈಗ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆ 39ರ ವಯಸ್ಸಿನ ಮುಶ್ಫಿಕುರ್ರಹೀಂ ಈ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಬಾಂಗ್ಲಾದೇಶದ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಸ್ಪಿನ್ನರ್ ರೋಸ್ಟನ್ ಚೇಸ್ ಬೌಲಿಂಗ್ನಲ್ಲಿ ಒಂದು ರನ್ ಗಳಿಸಿದ ನಂತರ ಮುಶ್ಫಿಕುರ್ ರಹೀಂ ಈ ಮೈಲಿಗಲ್ಲು ತಲುಪಿದರು. ಹಿರಿಯ ಬ್ಯಾಟರ್ ಆರಂಭದಲ್ಲಿ ತನ್ನ ಸಾಧನೆಯ ಬಗ್ಗೆ ಅರಿವಿಲ್ಲದವರಂತೆ ಕಂಡುಬಂದರು. ಡ್ರೆಸ್ಸಿಂಗ್ರೂಮ್ನಲ್ಲಿದ್ದ ಅವರ ಸಹ ಆಟಗಾರರು ತಮ್ಮ ಆಸನಗಳಿಂದ ಎದ್ದುನಿಂತು ಚಪ್ಪಾಳೆ ತಟ್ಟಿದಾಗ ಸಾಧನೆಯ ವಿಚಾರ ಗೊತ್ತಾಯಿತು.
ಬೆರಳು ನೋವಿನಿಂದಾಗಿ ಸರಣಿಯ ಮೊದಲ ಪಂದ್ಯದಿಂದ ವಂಚಿತರಾಗಿದ್ದ ಮುಶ್ಫಿಕುರ್ ರಹೀಂ ಎರಡನೇ ಟೆಸ್ಟ್ ಪಂದ್ಯದ ವೇಳೆ ತನ್ನ ವೃತ್ತಿಜೀವನದಲ್ಲಿ ಮತ್ತೊಂದು ಅಧ್ಯಾಯ ಸೇರಿಸಿದರು.
ಬಾಂಗ್ಲಾದೇಶದ ಪ್ರಮುಖ ರನ್ ಸ್ಕೋರರ್ ಎಂದು ಈಗಾಗಲೇ ತನ್ನನ್ನು ಗುರುತಿಸಿಕೊಂಡಿರುವ ಮುಶ್ಫಿಕುರ್ರಹೀಂ 2022ರಲ್ಲಿ 5,000 ರನ್ ಹಾಗೂ 2024ರಲ್ಲಿ 6,000 ರನ್ ತಲುಪಿದ ದೇಶದ ಮೊದಲ ಬ್ಯಾಟರ್ ಆಗಿದ್ದರು. ಇದೀಗ ಆ ದಾಖಲೆಯನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ದಿದ್ದು, 7,000 ರನ್ ಗಳಿಸಿದ ಮೊದಲ ಬಾಂಗ್ಲಾದೇಶದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಮುಶ್ಫಿಕುರ್ ರಹೀಂ ತನ್ನ 107ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 7,000 ರನ್ ಗಳಿಸಿದ್ದಾರೆ. 6,000ದಿಂದ 7,000 ರನ್ ಗಳಿಸಲು ಕೇವಲ 25 ಇನಿಂಗ್ಸ್ ಬೇಕಾಯಿತು. ಒಟ್ಟು 14 ಶತಕಗಳನ್ನು ಗಳಿಸಿರುವ ಮುಶ್ಫಿಕುರ್ ರಹೀಂ ಔಟಾಗದೆ 219 ಗರಿಷ್ಠ ಮೊತ್ತವಾಗಿದೆ.
ಬಾಂಗ್ಲಾದೇಶದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಸ್ಕೋರರ್ಗಳ ಪಟ್ಟಿಯಲ್ಲಿ ಮೂಮಿನುಲ್ ಹಕ್(5,293 ರನ್)ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಮೂರನೇ ಸ್ಥಾನದಲ್ಲಿದ್ದಾರೆ.
2005ರಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿರುವ ಮುಶ್ಫಿಕುರ್ರಹೀಂ ಬಾಂಗ್ಲಾದೇಶದ ಓರ್ವ ಅತ್ಯಂತ ಅನುಭವಿ ಟೆಸ್ಟ್ ಕ್ರಿಕೆಟಿಗನಾಗಿದ್ದಾರೆ. 2025ರ ನವೆಂಬರ್ನಲ್ಲಿ 100 ಟೆಸ್ಟ್ ಪಂದ್ಯಗಳನ್ನಾಡಿದ ಬಾಂಗ್ಲಾದೇಶದ ಮೊದಲ ಆಟಗಾರನಾಗಿದ್ದರು.
ಸೀಮಿತ ಓವರ್ಗಳ ಕ್ರಿಕೆಟ್ನಲ್ಲೂ ಮಹತ್ವದ ಕೊಡುಗೆಗಳನ್ನು ನೀಡಿರುವ ಮುಶ್ಫಿಕುರ್ ರಹೀಂ ಏಕದಿನ ಕ್ರಿಕೆಟ್ನಲ್ಲಿ 6,697 ರನ್ ಹಾಗೂ ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 1,495 ರನ್ ಗಳಿಸಿದ್ದರು. ಇದೀಗ ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ನಿವೃತ್ತಿಯಾಗಿರುವ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಉಳಿದಿದ್ದಾರೆ.






