191 ರನ್ ಗಳಿಸಿ ಹಲವು ದಾಖಲೆಗಳನ್ನು ಮುರಿದ ಮುಶ್ಫೀಕುರ್ರಹೀಮ್
ಪಾಕ್ ವಿರುದ್ಧದ ಟೆಸ್ಟ್ನಲ್ಲಿ ಬಾಂಗ್ಲಾದೇಶಕ್ಕೆ ಮುನ್ನಡೆ

ಮುಶ್ಫೀಕುರ್ರಹೀಮ್ | PC : X
ರಾವಲ್ಪಿಂಡಿ: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಶನಿವಾರ ಹಿರಿಯ ಬ್ಯಾಟರ್ ಮುಶ್ಫೀಕುರ್ರಹೀಮ್ ಬಾರಿಸಿದ ಅಮೋಘ 191 ರನ್ಗಳ ನೆರವಿನಿಂದ ಬಾಂಗ್ಲಾದೇಶವು ತನ್ನ ಮೊದಲ ಇನಿಂಗ್ಸ್ನಲ್ಲಿ ಬೃಹತ್ ಮೊತ್ತವನ್ನು ಕಲೆ ಹಾಕಿದೆ.
ಪಂದ್ಯದ ನಾಲ್ಕನೇ ದಿನದಂದು ಮುಶ್ಫೀಕುರ್ರಹೀಮ್ ತಂಡದ ಇನಿಂಗ್ಸ್ಗೆ ಭದ್ರ ಅಡಿಪಾಯ ಹಾಕಿದರು. ಅವರ ಬ್ಯಾಟಿಂಗ್ ವೈಭವದ ನೆರವಿನಿಂದ ಬಾಂಗ್ಲಾದೇಶವು ತನ್ನ ಮೊದಲ ಇನಿಂಗ್ಸ್ನಲ್ಲಿ 565 ರನ್ಗಳನ್ನು ಗಳಿಸಿದೆ. ಇದು ಪಾಕಿಸ್ತಾನದ ವಿರುದ್ಧ ಬಾಂಗ್ಲಾದೇಶದ ಗರಿಷ್ಠ ಟೆಸ್ಟ್ ಮೊತ್ತವಾಗಿದೆ. ಇದರೊಂದಿಗೆ ಆತಿಥೇಯ ತಂಡವು 117 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆಯನ್ನು ಗಳಿಸಿದೆ.
ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಪಾಕಿಸ್ತಾನವು ತನ್ನ ದ್ವಿತೀಯ ಇನಿಂಗ್ಸ್ನಲ್ಲಿ ಒಂದು ವಿಕೆಟ್ ಕಳೆದುಕೊಂಡು 23 ರನ್ ಗಳಿಸಿದೆ. ಅಬ್ದುಲ್ಲಾ ಶಫೀಕ್ 12ರಲ್ಲಿ ಮತ್ತು ನಾಯಕ ಶಾನ್ ಮಸೂದ್ 9ರಲ್ಲಿ ಕ್ರೀಸ್ನಲ್ಲಿದ್ದಾರೆ. ಆರಂಭಿಕ ಸಯೀಮ್ ಅಯೂಬ್ ಕೇವಲ ಒಂದು ರನ್ ಗಳಿಸಿ ಮೂರನೇ ಓವರ್ನಲ್ಲಿ ವಿಕೆಟ್ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಈಗ ಆತಿಥೇಯ ತಂಡವು 94 ರನ್ಗಳ ಹಿನ್ನಡೆಯಲ್ಲಿದೆ. ಅದು ತನ್ನ ಮೊದಲ ಇನಿಂಗ್ಸ್ನಲ್ಲಿ 6 ವಿಕೆಟ್ಗಳ ನಷ್ಟಕ್ಕೆ 448 ರನ್ ಗಳಿಸಿ ಡಿಕ್ಲೇರ್ ಮಾಡಿತ್ತು.
ಪಾಕಿಸ್ತಾನದ ವಿರುದ್ಧ ಆಡಿರುವ 13 ಟೆಸ್ಟ್ಗಳ ಪೈಕಿ 12 ಪಂದ್ಯಗಳಲ್ಲಿ ಸೋತಿರುವ ಬಾಂಗ್ಲಾದೇಶವು ಹಾಲಿ ಪಂದ್ಯದಲ್ಲಿ ಗೆಲುವಿನ ಅವಕಾಶವೊಂದನ್ನು ಎದುರು ನೋಡುತ್ತಿದೆ. ಪಂದ್ಯದ ಕೊನೆಯ ದಿನವಾದ ರವಿವಾರ ತನ್ನ ಸ್ಪಿನ್ನರ್ಗಳಿಗೆ ಪಿಚ್ನಲ್ಲಿ ತಿರುವು ಪಡೆಯಲು ಸಾಧ್ಯವಾದರೆ ಪಾಕಿಸ್ತಾನಿ ಬ್ಯಾಟರ್ಗಳನ್ನು ಕಡಿಮೆ ಮೊತ್ತಕ್ಕೆ ಮಣಿಸಿ ಗೆಲುವು ತನ್ನದಾಗಿಸಿಕೊಳ್ಳಬಹುದು ಎನ್ನುವುದು ಅದರ ಯೋಚನೆಯಾಗಿದೆ. ಆದರೆ ನಾಲ್ಕನೇ ದಿನದವರೆಗೆ ಪಿಚ್ ಸ್ಪಿನ್ನರ್ಗಳಿಗೆ ಪೂರಕವಾಗಿ ವರ್ತಿಸಿಲ್ಲ.
ಪಂದ್ಯದ ನಾಲ್ಕನೇ ದಿನ ನಿಶ್ಚಿತವಾಗಿಯೂ ಮುಶ್ಫೀಕುರ್ರಹೀಮ್ಗೆ ಸೇರಿತ್ತು. ಅವರು ಲಿಟನ್ ದಾಸ್ (56) ಜೊತೆಗೆ ಆರನೇ ವಿಕೆಟ್ಗೆ 114 ರನ್ಗಳನ್ನು ಸೇರಿಸಿದರು. ಬಳಿಕ ಮೆಹಿದಿ ಹಸನ್ ಮೀರಜ್ ಜೊತೆಗೆ ಏಳನೇ ವಿಕೆಟ್ಗೆ ದಾಖಲೆಯ 194 ರನ್ಗಳನ್ನು ಸೇರಿಸಿದರು. ಮೆಹಿದಿ ಹಸನ್ 77 ರನ್ಗಳ ದೇಣಿಗೆ ನೀಡಿದರು.
ಪಾಕಿಸ್ತಾನ ವಿರುದ್ಧದ ಬಾಂಗ್ಲಾದೇಶದ ಹಿಂದಿನ ಗರಿಷ್ಠ ಟೆಸ್ಟ್ ಮೊತ್ತ 6 ವಿಕೆಟ್ಗಳ ನಷ್ಟಕ್ಕೆ 555 ಆಗಿತ್ತು. ಆ ಮೊತ್ತವು 2015ರಲ್ಲಿ ಖುಲ್ನದಲ್ಲಿ ದಾಖಲಾಗಿತ್ತು.
ಮುಶ್ಫೀಕುರ್ರಹೀಮ್ 8 ಗಂಟೆ ಮತ್ತು 42 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದು, 22 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ. ಅಂತಿಮವಾಗಿ ವೇಗಿ ಮುಹಮ್ಮದ್ ಅಲಿಯ ಎಸೆತದಲ್ಲಿ ವಿಕೆಟ್ಕೀಪರ್ ಮುಹಮ್ಮದ್ ರಿಝ್ವಾನ್ಗೆ ಕ್ಯಾಚ್ ನೀಡಿ ಅವರು ನಿರ್ಗಮಿಸಿದರು.
ಬಾಂಗ್ಲಾದೇಶದ ಬ್ಯಾಟರ್ ಒಬ್ಬ ಪಾಕಿಸ್ತಾನದಲ್ಲಿ ಗರಿಷ್ಠ ರನ್ ಗಳಿಸಿದ ಜಾವೇದ್ ಉಮರ್ರ 119 ರನ್ಗಳ ದಾಖಲೆಯನ್ನು ಮುರಿದರು. ಜಾವೇದ್ ಉಮರ್ 2003ರಲ್ಲಿ ಪೇಶಾವರದಲ್ಲಿ ಈ ದಾಖಲೆ ನಿರ್ಮಿಸಿದ್ದರು.
ಮುಶ್ಫೀಕುರ್ರಹೀಮ್ ನಿರ್ಗಮನದ ಬಳಿಕ, ಮೆಹಿದಿ ಹಸನ್ ತಂಡದ ಮೊತ್ತಕ್ಕೆ ಇನ್ನೂ 37 ರನ್ಗಳ ದೇಣಿಗೆ ನೀಡಿ ನಿರ್ಗಮಿಸಿದರು.
ಅಂತಿಮವಾಗಿ ಶೋರಿಫುಲ್ ಇಸ್ಲಾಮ್ರನ್ನು 22 ರನ್ಗೆ ಔಟ್ ಮಾಡುವ ಮೂಲಕ ನಸೀಮ್ ಶಾ ಬಾಂಗ್ಲಾದೇಶದ ಇನಿಂಗ್ಸನ್ನು ಮುಕ್ತಾಯಗೊಳಿಸಿದರು.
ನಸೀಮ್ ಶಾ 93 ರನ್ಗಳನ್ನು ನೀಡಿ 3 ವಿಕೆಟ್ಗಳನ್ನು ಪಡೆದರು. ಇದು ಪಾಕಿಸ್ತಾನದ ಬೌಲರ್ಗಳ ಪೈಕಿ ಶ್ರೇಷ್ಠ ಸಾಧನೆಯಾಗಿದೆ.







