ಭಾರತದ ವಿರುದ್ಧ ದ್ವಿತೀಯ ಟೆಸ್ಟ್ | ಚೊಚ್ಚಲ ಶತಕ ಸಿಡಿಸಿದ ಮುತ್ತುಸ್ವಾಮಿ ಯಾರು?

ಮುತ್ತುಸ್ವಾಮಿ | PC : PTI
ಗುವಾಹಟಿ, ನ.23: ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಎಸ್.ಮುತ್ತುಸ್ವಾಮಿ ಭಾರತ ವಿರುದ್ದ ರವಿವಾರ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ತನ್ನ ಚೊಚ್ಚಲ ಟೆಸ್ಟ್ ಶತಕ ಗಳಿಸಿದರು. ತನ್ನ ಎಂಟನೇ ಟೆಸ್ಟ್ ಪಂದ್ಯವನ್ನಾಡಿದ ಮುತ್ತುಸ್ವಾಮಿ 192 ಎಸೆತಗಳಲ್ಲಿ ಶತಕ ಪೂರೈಸಿದರು. ಮುತ್ತುಸ್ವಾಮಿ ಈ ವರ್ಷಾರಂಭದಲ್ಲಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಔಟಾಗದೆ 89 ರನ್ ಗಳಿಸಿದ್ದರು.
31ರ ಹರೆಯದ ಮುತ್ತುಸ್ವಾಮಿ ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ 1994ರ ಫೆಬ್ರವರಿ 22ರಂದು ಭಾರತೀಯ ಮೂಲದ ದಂಪತಿಗೆ ಜನಿಸಿದರು. ಮುತ್ತುಸ್ವಾಮಿ ಅವರ ಕುಟುಂಬ ಸದಸ್ಯರು ಈಗಲೂ ತಮಿಳುನಾಡಿನ ನಾಗಪಟ್ಟಣಂನಲ್ಲಿ ನೆಲೆಸಿದ್ದಾರೆ. ಡರ್ಬನ್ ನ ಕ್ಲಿಫ್ಟನ್ ಶಾಲೆಯಲ್ಲಿ ಓದುತ್ತಿದ್ದಾಗಲೇ ಕ್ರಿಕೆಟ್ ನತ್ತ ಒಲವು ತೋರಿದ ಮುತ್ತುಸ್ವಾಮಿ ಕ್ರೀಡೆಯ ಜೊತೆಗೆ ಶಿಕ್ಷಣವನ್ನೂ ಮುಂದುವರಿಸಿದರು. ಮಾಧ್ಯಮ ಹಾಗೂ ಮಾರ್ಕೆಟಿಂಗ್ ನಲ್ಲಿ ಪದವಿವನ್ನು ಕೂಡ ಪೂರ್ಣಗೊಳಿಸಿದರು.
ಡಾಲ್ಫಿನ್ಸ್ ತಂಡದಲ್ಲಿ ಹೆಸರುವಾಸಿಯಾದ ನಂತರ 2016-17ರಲ್ಲಿ ಸಿಎಸ್ಎ ಚತುರ್ದಿನ ಸರಣಿಯ ಪ್ರಥಮ ದರ್ಜೆ ತಂಡದಲ್ಲಿ ಖಾಯಂ ಸ್ಥಾನ ಪಡೆದರು. ಆರಂಭದಲ್ಲಿ ಬ್ಯಾಟರ್ ಆಗಿದ್ದ ಅವರು ಕ್ರಮೇಣ ಬೌಲಿಂಗ್ ನತ್ತ ಗಮನಹರಿಸಿದರು. ಆ ನಂತರ ಅಪ್ಪಟ ಆಲ್ ರೌಂಡರ್ ಎನಿಸಿಕೊಂಡರು. 2019ರಲ್ಲಿ ದಕ್ಷಿಣ ಆಫ್ರಿಕಾದ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. 2019ರಲ್ಲಿ ಭಾರತ ವಿರುದ್ಧ ವಿಶಾಖಪಟ್ಟಣದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ವಿಕೆಟನ್ನು ಪಡೆದು ಮಿಂಚಿದರು.
2025ರಲ್ಲಿ ಟಿ-20 ಹಾಗೂ ಏಕದಿನ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದ ಮುತ್ತುಸ್ವಾಮಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಪ್ರಯತ್ನ ಮುಂದುವರಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವಿಜೇತ ತಂಡದ ಭಾಗವಾಗಿದ್ದ ಮುತ್ತುಸ್ವಾಮಿ ಫೈನಲ್ ಪಂದ್ಯದಲ್ಲಿ ಆಡಿರಲಿಲ್ಲ.
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ 10 ವಿಕೆಟ್ ಗಳ ಗೊಂಚಲು ಹಾಗೂ ಔಟಾಗದೆ 89 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಕೋಲ್ಕತಾದಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದ ಅವರು ಗುವಾಹಟಿ ಟೆಸ್ಟ್ಗೆ ಅವಕಾಶ ಪಡೆದಿದ್ದಾರೆ. ಭಾರತ ಮೂಲದ ಇನ್ನೋರ್ವ ಸ್ಪಿನ್ನರ್ ಕೇಶವ ಮಹಾರಾಜ್ ತಂಡದಲ್ಲಿದ್ದ ಕಾರಣ ಮುತ್ತುಸ್ವಾಮಿ ಹೆಚ್ಚು ಅವಕಾಶಗಳನ್ನು ಪಡೆದಿರಲಿಲ್ಲ.
ಎರಡನೇ ಟೆಸ್ಟ್ನ ಆರಂಭದಲ್ಲಿ ತಾಳ್ಮೆಯಿಂದ ಆಡಿದ ಮುತ್ತುಸ್ವಾಮಿ, ಬೆಳಗ್ಗಿನ ಅವಧಿಯಲ್ಲಿ ಹೊಡೆತಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದರು. ಮೂರಂಕೆಯನ್ನು ತಲುಪಿದ ನಂತರ ಹಿಡಿತ ಸಾಧಿಸಿದರು. ಅವರ ಇನಿಂಗ್ಸ್ ರಿಸ್ಕ್ಗಿಂತ ಹೆಚ್ಚು ಶಿಸ್ತುಬದ್ದವಾಗಿತ್ತು.







