"ಸೋದರ ಸಂಬಂಧಿ ನಾನು ಮೃತಪಟ್ಟಿದ್ದೇನೆ ಎಂದು ಭಾವಿಸಿದ್ದರು": ಭಯಾನಕ ಘಟನೆ ನೆನಪಿಸಿದ ಜೆಮಿಮಾ ರೊಡ್ರಿಗ್ಸ್

ಜೆಮಿಮಾ ರೊಡ್ರಿಗ್ಸ್ |photo:PTI
ಹೊಸದಿಲ್ಲಿ, ಜ.9: ಭಾರತದ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಹಾಗೂ 2025ರ ಮಹಿಳೆಯರ ವಿಶ್ವಕಪ್ ವಿಜೇತ ತಂಡದ ಸದಸ್ಯೆ ಜೆಮಿಮಾ ರೊಡ್ರಿಗ್ಸ್, ತನ್ನ ಬಾಲ್ಯದ ಭಯಾನಕ ಘಟನೆಯೊಂದನ್ನು ನೆನಪಿಸಿಕೊಂಡರು. ಆ ಘಟನೆಯು ಕುಟುಂಬ ಸದಸ್ಯರಿಗೆ ಆಘಾತ ತಂದಿತ್ತು. ಘಟನೆ ನಡೆದಾಗ ನನಗೆ ಎಂಟು ವರ್ಷ ವಯಸ್ಸಾಗಿತ್ತು ಎಂದಿದ್ದಾರೆ.
ತನ್ನ ಸಹೋದರ ಸಂಬಂಧಿಯೊಂದಿಗೆ ಚರ್ಚ್ ಕಾರ್ಯಕ್ರಮಕ್ಕಾಗಿ ಅಡಿಟೋರಿಯಂಗೆ ತೆರಳಿದ್ದೆ. ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅಡಿಟೋರಿಯಂನ ಮೊದಲ ಮಹಡಿಯಿಂದ ಕೆಳಗೆ ಬಿದ್ದಿದ್ದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದೆ ಎಂದು ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಜೆಮಿಮಾ ಹೇಳಿದ್ದಾರೆ.
‘‘ನಾವು ಚರ್ಚ್ ಕಾರ್ಯಕ್ರಮಕ್ಕಾಗಿ ಸಭಾಂಗಣಕ್ಕೆ ತೆರಳಿದ್ದಾಗ ಎಲ್ಲ ಮಕ್ಕಳು ಸಭಾಂಗಣದಲ್ಲಿ ಆಟವಾಡಲು ತೆರಳಿದರು. ವಯಸ್ಕರು ಸಭಾಂಗಣದ ಒಳಗಿದ್ದರು. ಮಕ್ಕಳೆಲ್ಲರೂ ಮೋಜಿಗಾಗಿ ಪರಸ್ಪರ ಚಪ್ಪಲ್ ಎಸೆಯುವ ಆಟ ಆಡಲು ಆರಂಭಿಸಿದ್ದೆವು. ನನ್ನ ಸೋದರ ಸಂಬಂಧಿ ಚಪ್ಪಲ್ವೊಂದನ್ನು ಎಸೆದಿದ್ದಳು. ನಾನು ಅದನ್ನು ಪಡೆಯಲು ಇನ್ನೊಂದು ಬದಿಗೆ ಜಿಗಿಯಲು ನಿರ್ಧರಿಸಿದಾಗ ಬಾಕ್ಸ್ ಮೇಲೆ ಕಾಲಿಟ್ಟೆ. ಮೊದಲ ಮಹಡಿಯಿಂದ ಕೆಳಗೆ ಬಿದ್ದೆ. ಕೆಳಗೆ ಯಾರೋ ಒಬ್ಬರು ಕುಳಿತು ಆಹಾರ ತಿನ್ನುತ್ತಿದ್ದರು. ನಾನು ಅವರ ತಲೆಯ ಮೇಲೆ ಬಿದ್ದೆ. ಆಗ ನನ್ನ ಸೋದರ ಸಂಬಂಧಿಗಳು ನಾನು ಮೃತಪಟ್ಟಿದ್ದೇನೆಂದು ಭಾವಿಸಿದ್ದರು’’ಎಂದು ಜೆಮಿಮಾ ಹೇಳಿದರು.
25ರ ವಯಸ್ಸಿನ ಜೆಮಿಮಾ ಅಕ್ಟೋಬರ್ನಲ್ಲಿ ನಡೆದಿದ್ದ ಮಹಿಳೆಯರ ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ 127 ರನ್ ಗಳಿಸಿ ಭಾರತ ತಂಡವು ಫೈನಲ್ಗೆ ತಲುಪುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಮಹಿಳೆಯರ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡವು ಗರಿಷ್ಠ ರನ್ ಯಶಸ್ವಿಯಾಗಿ ಬೆನ್ನಟ್ಟುವಲ್ಲಿ ನೆರವಾಗಿದ್ದರು.
2026ರ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ(ಡಬ್ಲ್ಯುಪಿಎಲ್)ಜೆಮಿಮಾ ರೊಡ್ರಿಗ್ಸ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕಿಯಾಗಿ ಮುನ್ನಡೆಸಲು ಸಜ್ಜಾಗಿದ್ದಾರೆ.







