ಪುರುಷರ ಡಬಲ್ಸ್ | ಶ್ರೀರಾಮ್ ಬಾಲಾಜಿ, ಋತ್ವಿಕ್ ಬೊಲ್ಲಿಪಲ್ಲಿ ಹೊರಕ್ಕೆ

ಶ್ರೀರಾಮ್ ಬಾಲಾಜಿ | Photo - x
ಲಂಡನ್: ಭಾರತದ ಎನ್. ಶ್ರೀರಾಮ್ ಬಾಲಾಜಿ ಮತ್ತು ಋತ್ವಿಕ್ ಬೊಲ್ಲಿಪಲ್ಲಿ ಶನಿವಾರ ತಮ್ಮ ತಮ್ಮ ಜೊತೆಗಾರರೊಂದಿಗೆ ವಿಂಬಲ್ಡನ್ ಪುರುಷರ ಡಬಲ್ಸ್ ನಿಂದ ಹೊರಬಿದ್ದಿದ್ದಾರೆ. ಆದರೆ ಹೊರಬೀಳುವ ಮುನ್ನ ತಮ್ಮ ಎದುರಾಳಿಗಳಿಗೆ ಕಠಿಣ ಸ್ಪರ್ಧೆಯೊಡ್ಡಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ, ಬಾಲಾಜಿ ಮತ್ತು ಅವರ ಮೆಕ್ಸಿಕನ್ ಜೊತೆಗಾರ ಮಿಗುಯೆಲ್ ರೆಯೆಸ್-ವರೇಲ ನಾಲ್ಕನೇ ಶ್ರೇಯಾಂಕದ ಸ್ಪೇನ್ನ ಮಾರ್ಸೆಲ್ ಗ್ರಾನೋಲರ್ಸ್ ಮತ್ತು ಅರ್ಜೆಂಟೀನದ ಹೊರಾಶಿಯೊ ಝೆಬಲೋಸ್ ಜೋಡಿಗೆ ತೀವ್ರ ಸ್ಪರ್ಧೆಯೊಡ್ಡಿದರು. ಆದರೆ ಅಂತಿಮವಾಗಿ 4-6, 4-6 ಸೆಟ್ ಗಳಿಂದ ಸೋಲನುಭವಿಸಿದರು. ಪಂದ್ಯವು ಒಂದು ಗಂಟೆ 20 ನಿಮಿಷಗಳ ಕಾಲ ಸಾಗಿತು.
ಇನ್ನೊಂದು ಎರಡನೇ ಸುತ್ತಿನ ಪಂದ್ಯದಲ್ಲಿ, ಬೊಲ್ಲಿಪಲ್ಲಿ ಮತ್ತು ಅವರ ಕೊಲಂಬಿಯನ್ ಜೊತೆಗಾರ ನಿಕೊಲಸ್ ಬ್ಯಾರಿಯಂಟೋಸ್ ಕೂಡ ಕಠಿಣ ಹೋರಾಟ ನೀಡಿದರು. ಆದರೆ, ಅಂತಿಮವಾಗಿ ಆರನೇ ಶ್ರೇಯಾಂಕದ ಬ್ರಿಟಿಶ್ ಜೋಡಿ ಜೋ ಸ್ಯಾಲಿಸ್ಬರಿ ಮತ್ತು ನೀಲ್ ಸ್ಕಪ್ಸ್ಕಿ ಭಾರತ-ಕೊಲಂಬಿಯನ್ ಜೋಡಿಯನ್ನು ಒಂದು ಗಂಟೆ 47 ನಿಮಿಷಗಳಲ್ಲಿ 6-4, 7(9)-6 ಸೆಟ್ ಗಳಿಂದ ಮಣಿಸುವಲ್ಲಿ ಯಶಸ್ವಿಯಾದರು.
ಭಾರತದ ರೋಹನ್ ಬೋಪಣ್ಣ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.