ಖತರ್ ಓಪನ್ನಿಂದ ಹಿಂದೆ ಸರಿದ ರಫೆಲ್ ನಡಾಲ್

Photo : Instagram
ದೋಹಾ: ಕಳೆದ ತಿಂಗಳು ಬ್ರಿಸ್ಬೇನ್ನಲ್ಲಿ ಆಗಿರುವ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಸ್ಪೇನ್ ಆಟಗಾರ ರಫೆಲ್ ನಡಾಲ್ ಮುಂದಿನ ವಾರ ಆರಂಭವಾಗಲಿರುವ ಖತರ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಫೆ.19ರಿಂದ ದೋಹಾದಲ್ಲಿ ಆರಂಭವಾಗಲಿರುವ ಎಟಿಪಿ 250 ಟೂರ್ನಮೆಂಟ್ ನಲ್ಲಿ ನಡಾಲ್ ಟೆನಿಸ್ ಗೆ ಪುನರಾಗಮನವಾಗುವ ನಿರೀಕ್ಷೆ ಇತ್ತು. ಟೂರ್ನಿಯ ಪ್ರವೇಶ ಪಟ್ಟಿಯಲ್ಲಿ ನಡಾಲ್ ಹೆಸರು ಕಾಣಿಸಿಕೊಂಡಿತ್ತು.
ಇಂಡಿಯನ್ ವೆಲ್ಸ್ ನಲ್ಲಿ ಆಡುವ ಮೂಲಕ ಎಟಿಪಿಗೆ ವಾಪಸಾಗುವ ಮೊದಲು ಮಾರ್ಚ್ 3ರಂದು ಲಾಸ್ ವೇಗಸ್ನಲ್ಲಿ ತಮ್ಮದೇ ದೇಶದ ಕಾರ್ಲೊಸ್ ಅಲ್ಕರಾಝ್ ಎದುರು ಪ್ರದರ್ಶನ ಪಂದ್ಯ ಆಡುವ ವಿಶ್ವಾಸವನ್ನು 37ರ ಹರೆಯದ ನಡಾಲ್ ವ್ಯಕ್ತಪಡಿಸಿದರು.
ವಿಶ್ವದ ಮಾಜಿ ನಂ.1 ಆಟಗಾರ ನಡಾಲ್ ಸುಮಾರು ಒಂದು ವರ್ಷದ ನಂತರ ಬ್ರಿಸ್ಬೇನ್ ಟೂರ್ನಿಯಲ್ಲಿ ಟೆನಿಸ್ ಗೆ ವಾಪಸಾಗಿದ್ದರು. ಆದರೆ ಕ್ವಾರ್ಟರ್ ಫೈನಲ್ನಲ್ಲಿ ಮತ್ತೆ ಗಾಯದ ಸಮಸ್ಯೆಗೆ ಒಳಗಾಗಿದ್ದರು. ನಡಾಲ್ ಈ ವರ್ಷದ ಫ್ರೆಂಚ್ ಓಪನ್ ಹಾಗೂ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ವಿಶ್ವಾಸದಲ್ಲಿದ್ದಾರೆ. ನಡಾಲ್ 14 ಫ್ರೆಂಚ್ ಓಪನ್ ಕಿರೀಟಗಳ ಸಹಿತ 22 ಗ್ರ್ಯಾನ್ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.





