ನಡಾಲ್ರ ಫ್ರೆಂಚ್ ಓಪನ್ ಫೈನಲ್ ರ್ಯಾಕೆಟ್ 1.34 ಕೋಟಿ ರೂ.ಗೆ ಹರಾಜು

PC : X \ @DylanDittrich
ಹೊಸದಿಲ್ಲಿ: ರಫೆಲ್ ನಡಾಲ್ರ ಐತಿಹಾಸಿಕ 2017ರ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಟೆನಿಸ್ ರ್ಯಾಕೆಟ್ ದಾಖಲೆಯ 1,57,333 ಡಾಲರ್ಗೆ (ಸುಮಾರು 1.34 ಕೋಟಿ ರೂಪಾಯಿ) ಹರಾಜಾಗಿದೆ.
ರಫೆಲ್ ನಡಾಲ್ 2017ರ ಫೈನಲ್ನಲ್ಲಿ ಈ ಬಬೋಲಟ್ ರ್ಯಾಕೆಟ್ನಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಅವರು ಸ್ವಿಟ್ಸರ್ಲ್ಯಾಂಡ್ನ ಸ್ಟ್ಯಾನ್ ವಾವ್ರಿಂಕರನ್ನು ನೇರ ಸೆಟ್ಗಳಿಂದ ಸೋಲಿಸಿದ್ದರು.
ರವಿವಾರ ನಡೆದ ಪ್ರೆಸ್ಟೀಜ್ ಮೆಮರೇಬಿಲಿಯ ಹರಾಜಿನಲ್ಲಿ ಈ ರ್ಯಾಕೆಟ್ಗೆ ದಾಖಲೆಯ ಬೆಲೆ ಪ್ರಾಪ್ತವಾಗಿದೆ. ಈ ರ್ಯಾಕೆಟ್ ನಡಾಲ್ 2022ರ ಆಸ್ಟ್ರೇಲಿಯನ್ ಓಪನ್ನಲ್ಲಿ ಬಳಸಿದ್ದ ರ್ಯಾಕೆಟ್ ನಿರ್ಮಿಸಿದ್ದ ಹಿಂದಿನ ದಾಖಲೆಯನ್ನು ಮುರಿದಿದೆ. ಆ ರ್ಯಾಕೆಟ್ 1.19 ಕೋಟಿ ರೂ.ಗೆ ಹರಾಜಾಗಿತ್ತು.
2017ರ ಫ್ರೆಂಚ್ ಓಪನ್ ಫೈನಲ್ನಲ್ಲಿ ನಡಾಲ್ ತನ್ನ ಎದುರಾಳಿ ವಾವ್ರಿಂಕರನ್ನು 6-2, 6-3, 6-1 ಸೆಟ್ಗಳಿಂದ ಸೋಲಿಸಿದ್ದರು. ಅದು ಅವರ 10ನೇ ಫ್ರೆಂಚ್ ಓಪನ್ ಪ್ರಶಸ್ತಿಯಾಗಿತ್ತು. ಆ ವಿಜಯವು ರೊಲ್ಯಾಂಡ್ ಗ್ಯಾರೋಸ್ನಲ್ಲಿ ಅವರ ಪ್ರಾಬಲ್ಯವನ್ನು ಮತ್ತಷ್ಟು ಬಲಗೊಳಿಸಿತ್ತು. ಬಳಿಕ ಅವರು ಅದೇ ರೊಲ್ಯಾಂಡ್ ಗ್ಯಾರೋಸ್ ಅಂಗಣದಲ್ಲಿ ಇನ್ನೂ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದು, ಅವರ ಒಟ್ಟು ಫ್ರೆಂಚ್ ಓಪನ್ ಪ್ರಶಸ್ತಿಗಳ ಸಂಖ್ಯೆ 14ಕ್ಕೇರಿದೆ.
ಆ ರ್ಯಾಕೆಟನ್ನು ನಡಾಲ್ 2017ರ ಋತುವಿನುದ್ದಕ್ಕೂ ಬಳಸಿರುವುದರಿಂದ ಅದಕ್ಕೆ ಐತಿಹಾಸಿಕ ಮಹತ್ವ ಪ್ರಾಪ್ತವಾಗಿದೆ. ಅದೂ ಅಲ್ಲದೆ, 2017ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಅವರು ಒಂದೇ ಒಂದು ಸೆಟ್ಟನ್ನು ಕಳೆದುಕೊಂಡಿರಲಿಲ್ಲ.