ಟಿ-20 ಕ್ರಿಕೆಟಿಗೆ ಕಾಲಿಟ್ಟ ನಮನ್ ಧೀರ್ | ಆಡುವ ಬಳಗದಿಂದ ಹೊರಗುಳಿದ ವೈಭವ್ ಸೂರ್ಯವಂಶಿ

ನಮನ್ ಧೀರ್ | Photo Credit : PTI
ಲಕ್ನೊ: ವೆಸ್ಟ್ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ನಮನ್ ಧೀರ್ ತನ್ನ ಮೊದಲ ಟಿ-20 ಕ್ರಿಕೆಟ್ ಆಡುವ ಅವಕಾಶ ಪಡೆದಿದ್ದಾರೆ. ಯುವ ಆಟಗಾರ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದ ಆಡುವ 11ರ ಬಳಗದಿಂದ ಹೊರಗುಳಿದಿದ್ದಾರೆ.
ಸೆಪ್ಟಂಬರ್ 27ರಂದು ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈದಿದ್ದ ಧೀರ್, ಪಂದ್ಯಕ್ಕಿಂತ ಮೊದಲು ವೇಗದ ಬೌಲರ್ ಅರ್ಷದೀಪ್ ಸಿಂಗ್ರಿಂದ ತನ್ನ ಚೊಚ್ಚಲ ಟಿ-20 ಕ್ಯಾಪ್ ಸ್ವೀಕರಿಸಿದರು.
ವೆಸ್ಟ್ಇಂಡೀಸ್ ಸ್ಪಿನ್ನರ್ ಅಕೀಲ್ ಹುಸೇನ್ ತನ್ನ 100ನೇ ಟಿ-20 ಪಂದ್ಯವನ್ನಾಡಿದ್ದು, ಮಂಗಳವಾರ ಅವರ ಪಾಲಿಗೆ ವಿಶೇಷವೆನಿಸಿಕೊಂಡಿದೆ.
ಆಡುವ 11ರ ಬಳಗದಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಗಿಟ್ಟಿಸುವಲ್ಲಿ ವಿಫಲರಾದರು. ಸೂರ್ಯವಂಶಿ ಪಾಕಿಸ್ತಾನ ವಿರುದ್ಧ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಆಡಿದ್ದರು. ಸ್ವದೇಶಿ ನೆಲದಲ್ಲಿ ಭಾರತದ ಪರ ತನ್ನ ಚೊಚ್ಚಲ ಪಂದ್ಯವನ್ನಾಡಲು ಸೂರ್ಯವಂಶಿ ಇನ್ನಷ್ಟು ದಿನಗಳು ಕಾಯಬೇಕಾಗಿದೆ.
‘‘ನಾವು ಮೊದಲಿಗೆ ಬೌಲಿಂಗ್ ಆಯ್ದುಕೊಂಡಿದ್ದು ಸ್ವಲ್ಪ ಮಂಜಿನ ಕಾಟ ಕಾಡಬಹುದು. ನಾವಿಲ್ಲಿಗೆ ಕಳೆದ ರಾತ್ರಿ ಬಂದಿದ್ದೇವೆ. ಇಂದು ನಾವು ಪಂದ್ಯಕ್ಕೆ ಸಜ್ಜಾಗಬೇಕಾಗಿದೆ. ಪ್ರವಾಸಿ ವೆಸ್ಟ್ಇಂಡೀಸ್ ತಂಡವು ಉತ್ತಮ ಬ್ಯಾಟಿಂಗ್ ಹಾಗೂ ಆಲ್ರೌಂಡರ್ಗಳನ್ನು ಹೊಂದಿದೆ’’ ಎಂದು ಅಯ್ಯರ್ ಟಾಸ್ ನಂತರ ತಿಳಿಸಿದರು.
ಭಾರತ ತಂಡದಲ್ಲಿ ಐದು ಬದಲಾವಣೆಗಳು: ಭಾರತವು ಏಶ್ಯನ್ ಗೇಮ್ಸ್ ತಂಡದಿಂದ ಐದು ಬದಲಾವಣೆಗಳನ್ನು ಮಾಡಿದೆ. ಏಶ್ಯನ್ ಗೇಮ್ಸ್ ತಂಡದಲ್ಲಿದ್ದ ಜಸ್ಪ್ರಿತ್ ಬುಮ್ರಾ, ವಾಶಿಂಗ್ಟನ್ ಸುಂದರ್, ವಿಪ್ರಜ್ ನಿಗಮ್ ಹಾಗೂ ಯಶ್ ಠಾಕೂರ್ ಬದಲಿಗೆ ನಮನ್ ಧೀರ್, ನಿತೀಶ್ ರೆಡ್ಡಿ, ಕುಲದೀಪ ಯಾದವ್, ಪ್ರಿನ್ಸ್ ಯಾದವ್ ಹಾಗೂ ಮಯಾಂಕ್ ಯಾದವ್ ಪ್ರಸಕ್ತ ಸರಣಿಗೆ ಸೇರಿದ್ದಾರೆ.
ಆದರೆ, ಧೀರ್, ಕುಲದೀಪ್ ಹಾಗೂ ಮಯಾಂಕ್ ಮೊದಲ ಟಿ-20 ಪಂದ್ಯದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.






