ʼಸಿಸ್ಟಮ್ ನಲ್ಲಿ ಹೆಸರಿಲ್ಲ , ಒಂದೇ ಕೊಠಡಿಗೆ ಮೂವರು ಕ್ರೀಡಾಪಟುಗಳು ʼ : ಜಪಾನ್ ಏಷ್ಯನ್ ಗೇಮ್ಸ್ ಅವ್ಯವಸ್ಥೆ ಬಗ್ಗೆ ಭಾರತೀಯ MMA ಪಟು ವರುಣ್ ಸನ್ಯಾಲ್ ಅಸಮಾಧಾನ

Photo: screengrab/x.com/x.com/TheKhelIndia/IndiaToday
ನಗೋಯಾ / ಜಪಾನ್: ಏಷ್ಯನ್ ಗೇಮ್ಸ್ ನ ವಸತಿ ವ್ಯವಸ್ಥೆಗಳ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಭಾರತೀಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ (MMA) ಅಥ್ಲೀಟ್ ವರುಣ್ ಸನ್ಯಾಲ್ ಜಪಾನ್ಗೆ ಆಗಮಿಸಿದ ಬಳಿಕ ತಮಗಾದ ಸಮಸ್ಯೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದ ಅವರು, ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸನ್ಯಾಲ್ ಅವರು 2026ರ ಜನವರಿಯಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ MMA ಕ್ರೀಡೆಯು ಇದೇ ಮೊದಲ ಬಾರಿಗೆ ಸೇರ್ಪಡೆಯಾಗಿದೆ.
ಲಂಡನ್ನಿಂದ ಮುಂಬೈ ಹಾಗೂ ಸಿಂಗಾಪುರ ಮಾರ್ಗವಾಗಿ ನಗೋಯಾಗೆ ಆಗಮಿಸಿದ್ದ ಸನ್ಯಾಲ್ಗೆ ಜಪಾನ್ ತಲುಪಿದ ಬಳಿಕ ಸಮಸ್ಯೆಗಳು ಎದುರಾಗಿವೆ.
ತಮಗಾದ ಅನುಭವದ ಕುರಿತು ಪ್ರತಿಕ್ರಿಯಿಸಿರುವ ಸನ್ಯಾಲ್, ಕ್ಲಿಯರೆನ್ಸ್ ನೀಡಿ ಕೊಠಡಿ ಹಂಚಿಕೆ ಮಾಡುವಲ್ಲಿ ಅಧಿಕಾರಿಗಳು ಪರದಾಡಿದ ಕಾರಣ ವಿವಿಧ ಸ್ಥಳಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಯಿತು ಎಂದು ಹೇಳಿದ್ದಾರೆ.
“ನಗೋಯಾ ವಿಮಾನ ನಿಲ್ದಾಣದಿಂದ ಶಟಲ್ ಬಸ್ನಲ್ಲಿ ನಮ್ಮನ್ನು ಕರೆದೊಯ್ದರು. ಅಲ್ಲಿಗೆ ತಲುಪುತ್ತಿದ್ದಂತೆಯೇ ಸಂಪೂರ್ಣ ಗೊಂದಲದ ವಾತಾವರಣವಿತ್ತು. ನಾನು ಕೌಂಟರ್ಗೆ ಹೋದಾಗ ಅವರ ಸಿಸ್ಟಮ್ನಲ್ಲಿ ನನ್ನ ಹೆಸರು ಎಲ್ಲಿಯೂ ಕಾಣಿಸಲಿಲ್ಲ. ಅವರ ವ್ಯವಸ್ಥೆಯಲ್ಲಿ ನಾನೊಬ್ಬ ಪ್ರೇತದಂತಾಗಿದ್ದೆ. ಇದಕ್ಕೆ ಸುಮಾರು ಎರಡು ಗಂಟೆ ಬೇಕಾಯಿತು. ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ, ಎರಡು ಗಂಟೆಗಳ ಕಾಲ ಅವರು ಅತ್ತಿಂದಿತ್ತ ಓಡಾಡುತ್ತಲೇ ಇದ್ದರು. ಆ ಕೇಂದ್ರದಿಂದ ಹೊರಬರುವಷ್ಟರಲ್ಲಿ ಮೂರು ಗಂಟೆ ಕಳೆದಿತ್ತು. ಆದರೂ ನನ್ನ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ” ಎಂದು ಅವರು ಹೇಳಿದ್ದಾರೆ.
“ಈ ಯಾವುದೇ ಕೇಂದ್ರಗಳಲ್ಲಿ ಆಹಾರವಿರಲಿಲ್ಲ. ನೀರಿನ ಬಾಟಲಿಗಳನ್ನು ನೀಡುತ್ತಿದ್ದರು, ಆದರೆ ಊಟವಿರಲಿಲ್ಲ. ಹೊರಗೆ ಹೋಗಿ ಏನಾದರೂ ಖರೀದಿಸಲು ಕೂಡ ಸಾಧ್ಯವಿರಲಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರನೇ ಸ್ಥಳಕ್ಕೆ ತೆರಳಿದಾಗ ತಜಕಿಸ್ತಾನ ಮತ್ತು ಶ್ರೀಲಂಕಾದ ಕ್ರೀಡಾಪಟುಗಳೂ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಸನ್ಯಾಲ್ ಗಮನಿಸಿದ್ದಾರೆ.
“ಪ್ರತಿಯೊಬ್ಬರೂ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಎಲ್ಲೆಡೆ ಹರಡಿದೆ. ನಿಜಕ್ಕೂ ಇಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಆಶ್ಚರ್ಯವಾಯಿತು” ಎಂದು ಅವರು ಹೇಳಿದ್ದಾರೆ.
ಒಂದೇ ಕೊಠಡಿಗೆ ಮೂವರು ಕ್ರೀಡಾಪಟುಗಳ ನಿಯೋಜನೆ
ಕೊನೆಗೆ ಸನ್ಯಾಲ್ ಅವರನ್ನು ಮತ್ತೊಂದು ಸ್ಥಳಕ್ಕೆ ಕರೆದೊಯ್ದು ಕೊಠಡಿಯೊಂದನ್ನು ನೀಡಲಾಯಿತು. ಆದರೆ ಸುಮಾರು 30 ನಿಮಿಷಗಳ ಬಳಿಕ ಇಬ್ಬರು ಭಾರತೀಯ ಕ್ರೀಡಾಪಟುಗಳು ಆ ಕೊಠಡಿಗೆ ಬಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ನನ್ನ ಎದುರು ಇಬ್ಬರು ಭಾರತೀಯ ಕ್ರೀಡಾಪಟುಗಳು ಗೊಂದಲದಿಂದ ನಿಂತಿರುವುದನ್ನು ನೋಡಿದೆ. ನಾವಿಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸುತ್ತಾ, ‘ಇಲ್ಲಿ ಏನು ನಡೆಯುತ್ತಿದೆ?’ ಎಂದು ಆಶ್ಚರ್ಯಪಟ್ಟೆವು” ಎಂದು ಸನ್ಯಾಲ್ ಹೇಳಿದ್ದಾರೆ.
ಆ ಇಬ್ಬರು ಕ್ರೀಡಾಪಟುಗಳಿಗೂ ಅದೇ ಕೊಠಡಿಯನ್ನು ಹಂಚಿಕೆ ಮಾಡಲಾಗಿತ್ತು.
“ಸಿಸ್ಟಮ್ನಲ್ಲಿ ನನಗೆ ಈ ಕೊಠಡಿಯನ್ನು ನೀಡಲಾಗಿತ್ತು. ಆದರೆ ಮೂಲತಃ ಇದು ಅವರಿಗಾಗಿ ಮೀಸಲಾಗಿದ್ದ ಕೊಠಡಿಯಾಗಿತ್ತು” ಎಂದು ವರುಣ್ ತಿಳಿಸಿದ್ದಾರೆ.






