ಏಕೈಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು ಸೋಲಿಸಿದ ನಮೀಬಿಯ!

ವಿಂಡ್ಹೋಕ್ (ನಮೀಬಿಯ), ಅ. 12: ಶನಿವಾರ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಏಕೈಕ ಅಂತರ್ರಾಷ್ಟ್ರೀಯ ಟಿ20 ಪಂದ್ಯದಲ್ಲಿ ನಮೀಬಿಯ ತಂಡವು ದಕ್ಷಿಣ ಆಫ್ರಿಕವನ್ನು 4 ವಿಕೆಟ್ಗಳಿಂದ ಸೋಲಿಸಿ ಅಚ್ಚರಿ ಹುಟ್ಟಿಸಿದೆ.
ವಿಂಡ್ಹೋಕ್ನ ನಮೀಬಿಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, ಕೊನೆಯ ಘಟ್ಟದಲ್ಲಿ ವಿಕೆಟ್ಕೀಪರ್ ಝೇನ್ ಗ್ರೀನ್ ಪ್ರದರ್ಶಿಸಿದ ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಮೀಬಿಯವು ಆಹ್ಲಾದಕರ ಗೆಲುವು ಸಾಧಿಸಿತು. ಗ್ರೀನ್ 23 ಎಸೆತಗಳಲ್ಲಿ 30 ರನ್ಗಳನ್ನು ಸಿಡಿಸಿ ಔಟಾಗದೆ ಉಳಿದರು. ಪಂದ್ಯದ ಕೊನೆಯ ಎರಡು ಓವರ್ಗಳಲ್ಲಿ ಬಂದ ಒಟ್ಟು 26 ರನ್ ಗಳ ಪೈಕಿ 23ನ್ನು ಗ್ರೀನ್ ಒಬ್ಬರೇ ಗಳಿಸಿದರು.
ಕೊನೆಯದ್ದಕ್ಕಿಂತ ಮೊದಲಿನ ಚೆಂಡಿನಲ್ಲಿ ಸ್ಕೋರ್ ಸಮಬಲಗೊಡಿತು ಮತ್ತು ಕೊನೆಯ ಎಸೆತದಲ್ಲಿ ಗ್ರೀನ್ ವಿಜಯೀ ರನ್ಗಳನ್ನು ಹೊಡೆದರು.
ಗೆಲ್ಲಲು 20 ಓವರ್ಗಳಲ್ಲಿ 135 ರನ್ಗಳನ್ನು ಗಳಿಸುವ ಗುರಿಯನ್ನು ಪಡೆದ ನಮಿಬಿಯವು 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 138 ರನ್ಗಳನ್ನು ಗಳಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕದ ಬ್ಯಾಟರ್ಗಳ ವೇಗವನ್ನು ನಮೀಬಿಯ ಬೌಲರ್ಗಳು ನಿಯಂತ್ರಿಸಿದರು. ಮುಖ್ಯವಾಗಿ ರೂಬೆನ್ ಟ್ರಂಪಲ್ಮನ್ 28 ರನ್ಗಳನ್ನು ನೀಡಿ ಪ್ರಮುಖ ಮೂರು ವಿಕೆಟ್ಗಳನ್ನು ಉರುಳಿಸಿದರು.
ದಕ್ಷಿಣ ಆಫ್ರಿಕಕ್ಕೆ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ ಕೇವಲ 134 ರನ್ಗಳನ್ನು ಗಳಿಸಲು ಸಾಧ್ಯವಾಯಿತು. ಜಾಸನ್ ಸ್ಮಿತ್ 31 ರನ್ ಗಳಿಸಿ ಗರಿಷ್ಠ ರನ್ ಗಳಿಕೆದಾರರಾದರು.







