ಹದಗೆಟ್ಟ ವಾಯುಮಾಲಿನ್ಯ; ಕೂಳೆ ಸುಡುವ ಅವಧಿಯಲ್ಲಿ ಬದಲಾವಣೆ ಮಾಡಿದ ರೈತರು ಕಾರಣ: NASA

File photo: ANI
ವಾಶಿಂಗ್ಟನ್, ಡಿ. 16: ಉತ್ತರ ಭಾರತದಾದ್ಯಂತ ಕೃಷಿ ಕೂಳೆಗಳನ್ನು ಈಗ ಸಂಜೆ ವೇಳೆ ಹೆಚ್ಚು ಹೆಚ್ಚಾಗಿ ಸುಡುತ್ತಿರುವುದು ವಾಯುಮಾಲಿನ್ಯ ಪರಿಸ್ಥಿತಿ ಹದಗೆಡಲು ಕಾರಣವಾಗಿರುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘NASA’ ಹೇಳಿದೆ. ಅದೂ ಅಲ್ಲದೆ, ಈ ಪ್ರವೃತ್ತಿಯು ಕೂಳೆ ಸುಡುವುದು ಮತ್ತು ವಾಯು ಗುಣಮಟ್ಟದ ಮೇಲೆ ಅದು ಬೀರುವ ಪರಿಣಾಮದ ಮೇಲೆ ನಿಗಾ ಇಡುವ ಪ್ರಯತ್ನಗಳಿಗೆ ಸವಾಲಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ದಶಕಗಳ ಕಾಲ ರೈತರು ಭತ್ತ ಕಟಾವು ನಡೆಸಿದ ಬಳಿಕ ಬೆಳೆಯ ದಂಟುಗಳನ್ನು ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಸುಡುತ್ತಿದ್ದರು. ಇದರಿಂದಾಗಿ ಭಾರತದ ಗಂಗಾನದಿ ವ್ಯಾಪ್ತಿಯ ಬಯಲು ಪ್ರದೇಶದಲ್ಲಿ ಹೊಗೆ ವ್ಯಾಪಕವಾಗಿ ಹರಡುತ್ತಿತ್ತು. 2025ರಲ್ಲಿ, ಕೂಳೆ ಸುಡುವ ಋತು ಬಹುತೇಕ ಹಿಂದಿನ ಮಾದರಿಯಲ್ಲೇ ಸಾಗಿದೆ. ಆದರೆ, ಸುಡುವ ದೈನಂದಿನ ಸಮಯದಲ್ಲಿ ಮಾತ್ರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಾರೀ ವ್ಯತ್ಯಯ ಗೋಚರಿಸಿದೆ. ಇದು ಉಪಗ್ರಹ ವೀಕ್ಷಣೆಗಳು ಮತ್ತು ಇತ್ತೀಚಿನ ಅಧ್ಯಯನಗಳಿಂದ ಗೊತ್ತಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ NASA ತಿಳಿಸಿದೆ.
2025ರಲ್ಲೂ, ಕೂಳೆ ಸುಡುವ ಋತುವಿನ ಅವಧಿ ಹಿಂದಿನ ವರ್ಷಗಳ ಮಾದರಿಯಲ್ಲೇ ಇದೆ ಎಂದು NASA ದ ಗೊಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ನಲ್ಲಿರುವ ಮೋರ್ಗನ್ ಸ್ಟೇಟ್ ವಿಶ್ವವಿದ್ಯಾನಿಲಯದ ಪರಿಸರ ವಿಜ್ಞಾನಿ ಹಿರೇನ್ ಜೇತ್ವ ಹೇಳಿದ್ದಾರೆ. ಅಕ್ಟೋಬರ್ ತಿಂಗಳ ಕೊನೆಯ ವಾರದ ಅವಧಿಯಲ್ಲಿ ಕೂಳೆ ಸುಡುವಿಕೆ ತೀವ್ರಗೊಂಡ ನಂತರ ಸುಮಾರು ಒಂದು ತಿಂಗಳ ಕಾಲ ದಿಲ್ಲಿ ಮತ್ತು ಉತ್ತರ ಭಾರತದ ಇತರ ಹಲವಾರು ನಗರಗಳಲ್ಲಿ ವಾಯು ಗುಣಮಟ್ಟ ಕುಸಿದಿದೆ.
ಹಿರೇನ್ ಜೇತ್ವ ಸುಮಾರು ಒಂದು ದಶಕದ ಅವಧಿಯಲ್ಲಿ ಉಪಗ್ರಹ ದತ್ತಾಂಶಗಳನ್ನು ಬಳಸಿಕೊಂಡು ಭಾರತದ ಕೂಳೆ ಸುಡುವಿಕೆಯ ಮೇಲೆ ನಿಗಾ ಇಟ್ಟಿದ್ದಾರೆ. ಈ ಅವಧಿಯ ಆರಂಭಿಕ ವರ್ಷಗಳಲ್ಲಿ, ಕೂಳೆ ಸುಡುವಿಕೆಯನ್ನು ಹೆಚ್ಚಾಗಿ ಮಧ್ಯಾಹ್ನ ಒಂದು ಮತ್ತು ಎರಡು ಗಂಟೆಯ ನಡುವಿನ ಅವಧಿಯಲ್ಲಿ ನಿರ್ವಹಿಸಲಾಗುತ್ತಿತ್ತು.
ಆದರೆ, ಈಗ ಈ ಪ್ರವೃತ್ತಿಯಲ್ಲಿ ಬದಲಾವಣೆಯಾಗಿದೆ. ‘‘ಕಳೆದ ಕೆಲವು ವರ್ಷಗಳಲ್ಲಿ ಕೂಳೆ ಸುಡುವಿಕೆಯನ್ನು ದಿನದಲ್ಲಿ ತಡವಾಗಿ ಸುಡಲಾಗುತ್ತಿದೆ. ಈಗ ಹೆಚ್ಚಿನ ಕೂಳೆ ಸುಡುವಿಕೆಯನ್ನು ಸಂಜೆ 4 ಮತ್ತು 6 ಗಂಟೆಯ ನಡುವೆ ನಿರ್ವಹಿಸಲಾಗುತ್ತಿದೆ ಎನ್ನುವುದು ನನ್ನ ವಿಶ್ಲೇಷಣೆಯಿಂದ ಬೆಳಕಿಗೆ ಬಂದಿದೆ. ರೈತರು ತಮ್ಮ ಅಭ್ಯಾಸವನ್ನು ಬದಲಾಯಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಸಂಜೆ ಹೊತ್ತು ಬೆಳೆಯ ಅವಶೇಷಗಳನ್ನು ಸುಡುವುದರಿಂದ ವಾಯುಮಾಲಿನ್ಯದ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸಂಜೆ ಹೊತ್ತಿನಲ್ಲಿ ಗಾಳಿಯ ವೇಗ ಕಡಿಮೆ ಇರುತ್ತದೆ. ಹಾಗಾಗಿ ಮಾಲಿನ್ಯಕಾರಕಗಳು ರಾತ್ರಿಯ ವೇಳೆ ದಟ್ಟೈಸುತ್ತವೆ. ಇದು ವಾಯುಮಾಲಿನ್ಯ ಸಮಸ್ಯೆ ಹದಗೆಡಲು ಕಾರಣವಾಗುತ್ತದೆ.







